ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಜೊತೆಗೆ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದ್ದಾರೆ.ನವದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವತಿಯಿಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಸೈಬರ್ ಸುರಕ್ಷತೆ ಸೇರಿದಂತೆ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಅಂತರ್ಜಾಲ ಹಾಗೂ ಮೊಬೈಲ್ ಯುಗದಲ್ಲಿ ಒಳಿತು-ಕೆಡುಕುಗಳ ಬಗ್ಗೆ ನಿಗಾವಹಿಸಬೇಕಿದೆ. ಆದ್ದರಿಂದ ಒಳಿತು ಬಳಸಿಕೊಂಡು ಕೆಡುಕುಗಳನ್ನು ನಿರ್ಬಂಧಿಸಲು ಅವಕಾಶವಿದೆ ಎಂದರು.ಶಾಲೆಯಲ್ಲಿ ಪಾಠದ ಜೊತೆಗೆ ಆಟೋಟ, ಸಂಗೀತ, ಕಲೆ, ಸಾಹಿತ್ಯ ಹೀಗೆ ಹಲವು ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ವೆಂಕಟ್ ರಾಜಾ ತಿಳಿಸಿದರು.
ಮನೆಯಲ್ಲಿ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ಇದ್ದಲ್ಲಿ ಮಕ್ಕಳು ಅದನ್ನು ಅನುಸರಿಸುತ್ತಾರೆ. ಇದರಿಂದ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಪ್ರತಿನಿಧಿ ಡಾ.ಋಷಿ ತಮನ್ನ ಅವರು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ ವಹಿಸಬೇಕಾದ ಪಾತ್ರ ಕುರಿತು ಮಾತನಾಡಿ, ಮಕ್ಕಳಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಮಕ್ಕಳಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಬಾರದು. ಮಕ್ಕಳನ್ನು ಗೌರವಿಸಬೇಕು. ಮೊಬೈಲ್ ಬಳಕೆಯಿಂದ ಕಾಲಹರಣವಾಗುತ್ತದೆಯೇ ಹೊರತು, ಗುರಿ ಸಾಧನೆ ಮಾಡಲು ಸಾಧ್ಯವಿಲ್ಲ, ಇದರಿಂದ ಗಮನ ಬೇರೆಡೆ ಹೋಗುತ್ತದೆ. ಆದ್ದರಿಂದ ಸೈಬರ್ ಸುರಕ್ಷತೆ ಬಗ್ಗೆ ಎಚ್ಚರವಹಿಸಬೇಕು ಎಂದರು.ಕೂಡಿಗೆಯ ಡಯಟ್ ಪ್ರಾಂಶುಪಾಲ ಎಂ.ಚಂದ್ರಕಾಂತ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮಕ್ಕಳಾಗಿರಬೇಕು. ಪೋಷಕರು ಪೋಷಕರಾಗಿರಬೇಕು. ಆದರೆ ಇವರ ಪಾತ್ರ ಬದಲಾಗುತ್ತಿದೆ ಎಂದರು.
ಮಕ್ಕಳು ಯಥೇಚ್ಛವಾಗಿ ಮೊಬೈಲ್ ಬಳಕೆಯಿಂದ ಹಾದಿ ತಪ್ಪುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಯಂತ್ರಣ ಇರಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳ ಬದಲಾಗಿ, ಇಂದಿನ ಮಕ್ಕಳೇ, ಇಂದಿನ ಪ್ರಜೆಗಳು ಎಂಬಂತಾಗಬೇಕು ಎಂದು ಎಂ.ಚಂದ್ರಕಾಂತ್ ಹೇಳಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ ಮಾತನಾಡಿ, ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವಿಶೇಷ ಆಸಕ್ತಿ ವಹಿಸುವುದು ಅತೀ ಮುಖ್ಯ. ಮಕ್ಕಳಿಗೆ ನೋವಾಗದಂತೆ ನಡೆದುಕೊಳ್ಳುವುದು ಅತ್ಯವಶ್ಯಕ. ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿದಲ್ಲಿ ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಸೌಮ್ಯ ಪೊನ್ನಪ್ಪ, ಎಂ.ಕೃಷ್ಣಪ್ಪ, ಶಿಕ್ಷಣಾಧಿಕಾರಿ ಎಂ.ಮಹಾದೇವಸ್ವಾಮಿ, ವಿಷಯ ಪರಿವೀಕ್ಷಕರಾದ ಬಿಂಧು, ಪೊಲೀಸ್ ಇಲಾಖೆಯ ಸುಮತಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಮಾತನಾಡಿದರು.