12ರಂದು ಜಿಲ್ಲಾ ಮಟ್ಟದ ಯುವ ಉತ್ಸವ: ಶಾಸಕ ಇಕ್ಬಾಲ್
KannadaprabhaNewsNetwork | Published : Oct 08 2023, 12:02 AM IST
12ರಂದು ಜಿಲ್ಲಾ ಮಟ್ಟದ ಯುವ ಉತ್ಸವ: ಶಾಸಕ ಇಕ್ಬಾಲ್
ಸಾರಾಂಶ
ರಾಮನಗರ: ಜಿಲ್ಲೆಯ ಸಮಸ್ತ ಕಾಲೇಜು ಹಾಗೂ ಕಾಲೇಜೇತರ ಯುವ ಸಮೂಹಕ್ಕಾಗಿ ಅ.12ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ - 2023 ಆಯೋಜನೆ ಮಾಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
-15ರಿಂದ 29 ವರ್ಷದೊಳಗಿನ ಕಾಲೇಜು, ಕಾಲೇಜೇತರ ಯುವಕರಿಗೆ ವಿವಿಧ ಸ್ಪರ್ಧೆಗಳು ರಾಮನಗರ: ಜಿಲ್ಲೆಯ ಸಮಸ್ತ ಕಾಲೇಜು ಹಾಗೂ ಕಾಲೇಜೇತರ ಯುವ ಸಮೂಹಕ್ಕಾಗಿ ಅ.12ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವ - 2023 ಆಯೋಜನೆ ಮಾಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಸಹಸ್ರಾರು ಯುವಕ-ಯುವತಿಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಉತ್ಸವದಲ್ಲಿ 15ರಿಂದ 29 ವರ್ಷ ವಯಸ್ಸಿನವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಎಲ್ಲ ಪದವಿ, ಪದವಿ ಪೂರ್ವ, ತಾಂತ್ರಿಕ, ಕಾನೂನು, ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳು ಹಾಗೂ 29 ವರ್ಷದೊಳಗಿನ ಕಾಲೇಜೇತರ ಯುವಕ - ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದವರು ಮತ್ತೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಸಮೂಹ ನೃತ್ಯದಲ್ಲಿ ಕನಿಷ್ಟ 10 ಜನ ಮೇಲ್ಪಟ್ಟು ಭಾಗವಹಿಸಬಹುದು. ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಹೆಸರು ನೋಂದಣಿ (https://forms.gle/w7MJtexFbp8DQdJn6) ಮಾಡಿಕೊಳ್ಳಬಹುದು ಎಂದು ಹೇಳಿದರು. ಏನೇನು ಸ್ಪರ್ಧೆಗಳು ? ಭಾಷಣ ಸ್ಪರ್ಧೆಯು 3 + 1 ನಿಮಿಷ ಇರಲಿದ್ದು, ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 7 ಸಾವಿರ , ತೃತೀಯ ಬಹುಮಾನ 4 ಸಾವಿರ , ಸಾಂಸ್ಕೃತಿಕ ಸ್ಪರ್ಧೆಗೆ ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 20 ಸಾವಿರ , ತೃತೀಯ ಬಹುಮಾನ 15 ಸಾವಿರ ನೀಡಲಾಗುವುದು. ಮೊಬೈಲ್ ಛಾಯಾಗ್ರಹಣ, ಕವನ ಬರೆಯುವ, ಚಿತ್ರಕಲಾ ಸ್ಪರ್ಧೆಗೆ ತಲಾ ಪ್ರಥಮ ಬಹುಮಾನ 11 ಸಾವಿರ, ದ್ವಿತೀಯ ಬಹುಮಾನ 6 ಸಾವಿರ, ತೃತೀಯ ಬಹುಮಾನ 3,500 ಹಾಗೂ ರಂಗೋಲಿ ಸ್ಪರ್ಧೆಗೆ ಪ್ರಥಮ ಬಹುಮಾನ 11 ಸಾವಿರ, ದ್ವಿತೀಯ ಬಹುಮಾನ 5 ಸಾವಿರ, ತತೀಯ 3 ಸಾವಿರ ರುಪಾಯಿ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಉತ್ಸವ ನಡೆಸಲು ಕೇಂದ್ರ ಸರ್ಕಾರದಿಂದ ಕೇವಲ 49 ಸಾವಿರ ರು ಅನುದಾನ ಮಾತ್ರ ಬರುತ್ತದೆ. ಆ ಹಣದಿಂದ ಆಹ್ವಾನ ಪತ್ರಿಕೆ ಮುದ್ರಿಸಲು ಕೂಡ ಸಾಕಾಗುವುದಿಲ್ಲ. ಉತ್ಸವಕ್ಕಾಗಿ ಯಾರಿಂದಲೂ ಹಣ ಸಂಗ್ರಹ ಮಾಡಲಾಗುತ್ತಿಲ್ಲ. ಯುವಜನರಲ್ಲಿ ಕ್ರೀಡಾ ಮನೋಭಾವನೆ ಬೆಳೆಸಬೇಕೆಂಬ ಉದ್ದೇಶದಿಂದ ಬಹುಮಾನದ ಮೊತ್ತವನ್ನು ವೈಯಕ್ತಿಕವಾಗಿ ತಾವೇ ವಿತರಣೆ ಮಾಡುತ್ತಿರುವುದಾಗಿ ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲೆಯ ಐದು ತಾಲೂಕುಗಳಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಯುವಜನರಿಗಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ಉತ್ಸವದ ಯಶಸ್ಸಿಗಾಗಿ ಹಲವಾರು ಸಮಿತಿಗಳನ್ನು ರಚನೆ ಮಾಡಲಾಗಿದೆ. ಉತ್ಸವದ ದಿನ ಕ್ರೀಡಾಂಗಣದಲ್ಲಿ ರೇಷ್ಮೆ, ಕೃಷಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ತೆರೆಯಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶೈಲಜಾ, ಲಕ್ಷ್ಮಿ, ಡಾ.ಶ್ಯಾಮಲಾ, ಡಾ.ನಾಗರಾಜು, ಡಾ.ವೆಂಕಟೇಶ್, ನೆಹರು ಯುವ ಕೇಂದ್ರ ಸಹಾಯಕ ನಿರ್ದೇಶಕಿ ನಾಗಲಕ್ಷ್ಮಿ, ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಗುರುಪ್ರಸಾದ್ ಮತ್ತಿತರರು ಹಾಜರಿದ್ದರು. (ಬಾಕ್ಸ್) ಯೋಗೇಶ್ವರರೇ ಕಾಂಗ್ರೆಸ್ ಸೇರಬಹುದು: ಇಕ್ಬಾಲ್ ರಾಮನಗರ: ಬಿಜೆಪಿ ನಾಯಕರಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದ್ದೇವೆ. ಅವರನ್ನು ಕರೆತರುವ ಪ್ರಯತ್ನವನ್ನು ನಾನೇ ಮಾಡುತ್ತಿದ್ದು, ಬಹುಶಃ ಅವರೇ ಕಾಂಗ್ರೆಸ್ ಸೇರ್ಪಡೆ ಆಗಬಹುದು ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಇದ್ದರೆ ಏನೂ ಪ್ರಯೋಜನ ಇಲ್ಲ.ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮರಳುವಂತೆ ಚರ್ಚೆ ಮಾಡಿದ್ದೇನೆ. ಈಗಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಸಿ.ಪಿ.ಯೋಗೇಶ್ವರ್ ಅವರೇ ಕಾಂಗ್ರೆಸ್ ಗೆ ಬರಬಹುದು ಎಂದರು. ಕಾಂಗ್ರೆಸ್ ಸರ್ಕಾರ 136 ಶಾಸಕರನ್ನು ಹೊಂದಿದೆ. ಇಂತಹ ಸರ್ಕಾರವನ್ನ ಬೀಳಿಸಲು ಸಾಧ್ಯವೇ.? ನಮ್ಮ ಪಕ್ಷದಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಬದಲಿಗೆ ಬಿಜೆಪಿ-ಜೆಡಿಎಸ್ ಪಕ್ಷದಿಂದಲೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಒಟ್ಟು 25 ಮಂದಿ ನಮ್ಮ ಜೊತೆ ಬರಲು ಸಿದ್ದರಾಗಿದ್ದಾರೆ. ಇದರಲ್ಲಿ ಜೆಡಿಎಸ್ ನವರೇ 12ಮಂದಿ ಕಾಂಗ್ರೆಸ್ ಗೆ ಬರುವವರಿದ್ದಾರೆ ಎಂದು ಹೇಳಿದರು. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ನನ್ನ ಕ್ಷೇತ್ರಕ್ಕೆ ಈಗಾಗಲೇ ಒಂದಿಷ್ಟು ಅನುದಾನ ಬಂದಿದೆ. ವಸತಿ ಇಲಾಖೆಯಿಂದ ಮನೆ, ರಸ್ತೆ ಸೇರಿ ಹಲವು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಬರುವ ನಿರೀಕ್ಷೆಯಿದೆ. ಕೆಲ ಶಾಸಕರಿಗೆ ಅನುದಾನದ ಕೊರತೆ ಆಗಿದ್ದರೂ ಮುಖ್ಯಮಂತ್ರಿಗಳು ಅದನ್ನು ಬಗೆಹರಿಸುತ್ತಾರೆ ಎಂದು ತಿಳಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ-ಜೆಡಿಎಸ್ ಒಂದಾಗಿತ್ತು. ಆಗಲೂ 2.30 ಲಕ್ಷ ಮತಗಳ ಅಂತರದಲ್ಲಿ ಡಿ.ಕೆ.ಸುರೇಶ್ ಗೆದ್ದಿದ್ದರು. ಈ ಬಾರಿ ಮತ್ತಷ್ಟು ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸಂಸದರ ಅಭಿವೃದ್ಧಿ ಕಾರ್ಯಗಳೇ ಅವರನ್ನು ಗೆಲ್ಲಿಸುತ್ತದೆ. ಬಿಜೆಪಿ-ಜೆಡಿಎಸ್ ಕುತಂತ್ರದಿಂದ ಒಂದು ವೋಟು ಕೂಡ ಕಡಿಮೆ ಆಗುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 7ಕೆಆರ್ ಎಂಎನ್ 1.ಜೆಪಿಜಿ ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.