ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾವೇರಿ ನದಿ ನೀರು ಹಂಚಿಕೆ ಪರಿಹಾರ ಕಂಡುಕೊಳ್ಳುವುದು, ರಾಷ್ಟ್ರದ ಗಡಿ ಪ್ರದೇಶದಲ್ಲಿ ಹೆಚ್ಚಿನ ರಕ್ಷಣಾ ಕಾರ್ಯಕೈಗೊಂಡು ರಾಷ್ಟ್ರಕ್ಕೆ ನುಸುಳಿ ಬರುವವರನ್ನು ತಡೆಯುವುದು, ಅಂತಾರಾಷ್ಟ್ರೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು...ಹೀಗೆ ಹಲವು ವಿಚಾರಗಳ ಕುರಿತು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ‘ಯುವ ಸಂಸತ್ ಸ್ಪರ್ಧೆ’ ಕಾರ್ಯಕ್ರಮದಲ್ಲಿ ವಿಪಕ್ಷದಿಂದ ಕೇಳಿ ಬಂದ ಪ್ರಶ್ನೆಗಳ ಸುರಿಮಳೆ.
ಇದಕ್ಕೆ ಆಡಳಿತ ಪಕ್ಷದಿಂದ ಸಮರ್ಪಕ ಉತ್ತರವೂ ದೊರೆಯಿತು. ಭಾರತ ‘ಅಲಿಪ್ತ ನೀತಿ’ ಹೊಂದಿದ್ದು, ಸದಾ ಶಾಂತಿಯನ್ನು ಬಯಸುತ್ತದೆ. ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಬಂಧವನ್ನು ಬಲಪಡಿಸಲು ಸದಾ ಸನ್ನದ್ಧವಾಗಿದೆ ಎಂಬ ಉತ್ತರ ದೊರೆಯಿತು.ಇಸ್ರೇಲ್ ಮತ್ತು ಹಮಾಸ್, ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಆ ರಾಷ್ಟ್ರದ ಮುಖ್ಯಸ್ಥರ ಜೊತೆ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತ ಸದಾ ಶಾಂತಿಯನ್ನು ಬಯಸುತ್ತದೆ ಎಂದು ಆಡಳಿತ ಪಕ್ಷದಿಂದ ಉತ್ತರ ದೊರೆಯಿತು.
ನೋಟು ಅಮಾನ್ಯೀಕರಣ ಮಾಡಿದರೂ ಕಪ್ಪುಹಣ ಸಂಗ್ರಹ ಕಡಿಮೆಯಾಗಿಲ್ಲ. ಕಪ್ಪುಹಣ ಸಂಗ್ರಹ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹ ವಿಪಕ್ಷದಿಂದ ಕೇಳಿ ಬಂದಿತ್ತು.ಇದಕ್ಕೆ ಆಡಳಿತ ಪಕ್ಷದವರು ಸಮರ್ಪಕ ಉತ್ತರ ನೀಡಿ, ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು. ಜೊತೆಗೆ ಸಮಾನವಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಏಕರೂಪ ಕಾನೂನುಗಳು ಜಾರಿಯಾಗಬೇಕು, ಸಮಾಜ ನಿಂತ ನೀರು ಆಗದೆ, ಹರಿಯುವ ನೀರು ಆಗಬೇಕು. ಆ ದಿಸೆಯಲ್ಲಿ ಬದಲಾವಣೆಯತ್ತ ಮುನ್ನೆಡೆಯಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ಮಹತ್ವ ವಿರೋಧ ಪಕ್ಷಕ್ಕೂ ಇದೆ. ಆಡಳಿತ ಪಕ್ಷ ತಪ್ಪು ಮಾಡಿದರೆ ಸರಿ ದಾರಿಗೆ ತರುವುದು ವಿರೋಧ ಪಕ್ಷದ ಕರ್ತವ್ಯವಾಗಿದೆ ಎಂಬುವುದು ವಿದ್ಯಾರ್ಥಿಗಳಿಂದ ಕೇಳಿ ಬಂದಿತು.ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನ ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು. ತಿತಿಮತಿ ಸರ್ಕಾರಿ ಪಿಯು ಕಾಲೇಜಿನ ವಿನಯ ಕುಮಾರ, ವಿರಾಜಪೇಟೆ ಸರ್ಕಾರಿ ಪಿಯು ಕಾಲೇಜಿನ ಅನ್ಸಿಕಾ, ಸೋಮವಾರಪೇಟೆಯ ಪಿಯು ಕಾಲೇಜಿನ ಅಮೃತ್, ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಪ್ರೀತಂ, ಮೂರ್ನಾಡು ಪಿಯು ಕಾಲೇಜಿನ ಅನನ್ಯ ದೇವೇಂದ್ರ ನಾಯಕ್, ನಾಪೋಕ್ಲು ಸರ್ಕಾರಿ ಪಿಯು ಕಾಲೇಜಿನ ರಾಣಿ, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಡಿಂಪಲ್, ಸೋಮವಾರಪೇಟೆ ಪಿಯು ಕಾಲೇಜಿನ ಇಮ್ರಾನ್, ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಶ್ರೀನಿವಾಸ ಇತರರು ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸುಮಾರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುವ ಸಂಸತ್‌ನಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಭಾರತವು ವಿಶ್ವದಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿದ್ದು, ಕೇಂದ್ರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ, ಹಾಗೆಯೇ ರಾಜ್ಯದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಒಳಗೊಂಡಿದ್ದು, ಪ್ರಜಾಪ್ರಭುತ್ವ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಾಗಬೇಕು ಎಂದರು.ಸುಗಮ ಹಾಗೂ ಸುಭದ್ರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ತೆಗೆದುಕೊಂಡು ಹೋಗುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ವೀಣಾ ಅಚ್ಚಯ್ಯ ಅವರು ಹೇಳಿದರು.
ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಪಿ.ಎಂ. ದೇವಕಿ ಮಾತನಾಡಿದರು,ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳಾ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು, ಅವಕಾಶ ಕಲ್ಪಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಯುವ ಸಂಸತ್‌ನ್ನು ಆಯೋಜಿಸಲು ಸರ್ಕಾರ ಅವಕಾಶ ಮಾಡಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಚಿದಾನಂದ ಮಾತನಾಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರಾ ಮೈನಾ, ಸಂತ ಮೈಕಲರ ಶಾಲೆಯ ಪ್ರಾಂಶುಪಾಲ ಸುಮಂತ್ ಕೆ.ಎಸ್., ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉದಯ್ ಕುಮಾರ್ ಇತರರು ಇದ್ದರು.