ಸಾರಾಂಶ
ಹಾವೇರಿ: ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವುದು ಹಾಗೂ ಅವರ ಆಪ್ತ ಕಾರ್ಯದರ್ಶಿ ಆನಂದಕುಮಾರ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಅಲೆಮಾರಿ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ, ಬೆಂಗಳೂರು ನಗರದಲ್ಲಿ ಜು. 5ರಂದು ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ 49 ಜಾತಿಗಳ ಅಲೆಮಾರಿಗಳ ಮುಖಂಡರ ಸಭೆ ನಡೆಸುವಾಗ, ಕೊರಚ, ಕೊರವ ಸಮಾಜದ ಮುಖಂಡರಾದ ಜಿ. ಪಲ್ಲವಿ ಸಭೆಗೆ ಬಂದು ಗೊಂದಲ ಸೃಷ್ಟಿಸಿ, ಗಲಾಟೆ ಮಾಡಿ ಕೆಲವು ಅಲೆಮಾರಿ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ನಿಜಕ್ಕೂ ಜಿ. ಪಲ್ಲವಿ ಮಾಡಿದ ಅವಮಾನವಾಗಿದೆ. ಇದರಿಂದ ಅಲೆಮಾರಿಗಳ ಸಮುದಾಯಗಳ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿ. ಪಲ್ಲವಿ ಅವರಿಗೆ ತಮ್ಮದೇಯಾದ ಕೊರಚ, ಕೊರವ ಸಮಾಜದ ಬಗ್ಗೆ ಕಾಳಜಿ ಇದ್ದರೆ ಅವರು ಪ್ರತ್ಯೇಕ ನಿಗಮ ಮಾಡಲು ಹೋರಾಟ ಮಾಡಲಿ. ಅದನ್ನು ಬಿಟ್ಟು ಅಲೆಮಾರಿಗಳ 7 ಜನ ನಾಯಕರ ಮೇಲೆ ಪ್ರಕರಣ ದಾಖಲು ಮಾಡಿದ್ದು ನ್ಯಾಯಸಮ್ಮತವಲ್ಲ. ಸಂವಿಧಾನಬದ್ಧ ಹಕ್ಕು ಕೊಡಿಸುವ ಮಹತ್ತರ ಕಾರ್ಯವನ್ನು ಎಚ್. ಆಂಜನೇಯ ಮಾಡಿದ್ದಾರೆ ಎಂದರು.ಸಿಳ್ಳೆಕ್ಯಾತರ ಸಮುದಾಯದ ರಾಜ್ಯಾಧ್ಯಕ್ಷ ಸುಭಾಸ ಚೌಹಾಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿ. ಪಲ್ಲವಿ ಅವರನ್ನು ಪರಿಶಿಷ್ಟ ಜಾತಿ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ನ್ಯಾರಲಕಂಟಿ, ಮಂಜುನಾಥ ವೇಷಗಾರ, ಸಿಂಧೋಳ ಸಮುದಾಯದ ಮುಖಂಡ ರಂಗಪ್ಪ ದುರಗಮುರಗಿ, ಮಂಜಪ್ಪ ದುರಗಮುರಗಿ, ಮರಿಸ್ವಾಮಿ ರಾಣೇಬೆನ್ನೂರು, ರವಿಚಂದ್ರ ಮೋತಿ, ಮಾರೆಪ್ಪ ಗುಡೇಗೋಡ, ಧರ್ಮಣ್ಣ ಮಹಾಂತ, ದರ್ಶನ ಕಿಳ್ಳಿಕ್ಯಾತ, ಮಾರುತಿ ಭಂಡಾರಿ, ಪೀರಪ್ಪ ಬಾದಗಿ, ಲಕ್ಷ್ಮವ್ವ ಬಾದಗಿ, ಈರವ್ವ ಕೊಂಡ್ರ, ಮಾರಕ್ಕ ಬಾದಗಿ, ದುರಗಮ್ಮ ಬಾದಗಿ, ಶಿವು ಮುಗ್ಗದವರ ಸೇರಿದಂತೆ ಇತರರು ಇದ್ದರು.