ಸಾರಾಂಶ
ಮೂರು ದಿನಗಳ ಕಾಲ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮಂಗಳವಾರ ಬೆಲೂನ್‌ಗಳನ್ನು ಹಾರಿ ಬಿಡುವ ಮೂಲಕ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೆಡೆಟ್‌ನಲ್ಲಿ ದೈಹಿಕ ಕ್ಷಮತೆ, ಮಾನಸಿಕವಾಗಿ ಕಠಿಣ, ಹಾಗೂ ನೈತಿಕವಾಗಿ ನೇರ ಸಾಮರ್ಥ್ಯ, ಇರಬೇಕು. ಕ್ರೀಡೆಯ ಮೂಲಕ ಇವುಗಳನ್ನು ಪಡೆಯಬಹುದಾಗಿದೆ. ಓರ್ವ ಕ್ರೀಡಾಪಟುವಿಗೆ ತಂಡ ಸ್ಫೂರ್ತಿ, ನಾಯಕತ್ವದ ಗುಣ, ಮತ್ತು ಬದ್ಧತೆ ಇರಬೇಕಾಗುತ್ತದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅಭಿಪ್ರಾಯಪಟ್ಟಿದ್ದಾರೆ.ಮೂರು ದಿನಗಳ ಕಾಲ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುವ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮಂಗಳವಾರ ಬೆಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾತನಾಡಿ, ಈ ವಾರ್ಷಿಕ ಕ್ರೀಡಾಕೂಟಕ್ಕಾಗಿ ಹಗಲಿರುಳು ಶ್ರಮಿಸಿದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಿದರು.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಎಲ್ಲಾ ಠಾಣೆಯ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.ಪ್ರತಿದಿನ ಕರ್ತವ್ಯದ ಜಂಜಾಟದಲ್ಲಿ ಇರುವವರಿಗೆ ಒಂದಿಷ್ಟು ಅವಧಿ ಮಾನಸಿಕವಾಗಿ ಈ ಕ್ರೀಡಾಕೂಟಗಳ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಲು ಅವಕಾಶ ಈ ಕ್ರೀಡಾಕೂಟಗಳ ಮೂಲಕ ಸಾಧ್ಯವಾಗುತ್ತದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲೆಯ ಹಲವು ಪೊಲೀಸರು, ಪೊಲೀಸ್ ಅಧಿಕಾರಿಗಳು, ಭಾಗವಹಿಸಿದರು.ನಾಳೆ ಸಮಾರೋಪ:
ಗುರುವಾರ ಸಂಜೆ 4 ಗಂಟೆಗೆ ಕ್ರೀಡಾಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕೆ. ಸುಂದರ್ ರಾಜ್ ಭಾಗವಹಿಸಲಿದ್ದಾರೆ.