ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಸಮಾರೋಪಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ ಮೂರು ದಿನಗಳಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಶನಿವಾರ ಸಮಾರೋಪಗೊಂಡಿತು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಬೋರಲಿಂಗಯ್ಯ ಪಾಲ್ಗೊಂಡು ಮಾತನಾಡಿ ಕ್ರೀಡೆ ಇರಲಿ, ಯಾವುದೇ ಸನ್ನಿವೇಷ ಇರಲಿ ಸವಾಲನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ಮನಸ್ಥಿತಿ ಎಲ್ಲರಲ್ಲೂ ಇರಬೇಕೆಂದು ಸಲಹೆ ನೀಡಿದರು.

ನಮ್ಮ ಆರೋಗ್ಯವನ್ನು ಕಾಪಾಡಲು ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಗೆದ್ದಾಗ ಸಂತೋಷಪಡುತ್ತೇವೆ. ಆದರೆ ಸೋಲನುಭವಿಸಿದಾಗ ಅದನ್ನು ಸವಾಲಾಗಿ ತೆಗೆದುಕೊಳ್ಳುವ ಮನಸ್ಥಿತಿ ಕಡಿಮೆಯಿದೆ. ಆದ್ದರಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಇದ್ದರು.

ಪುರುಷರಿಗೆ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಧರ್ಮ ವಿರಾಜಪೇಟೆ ಪ್ರಥಮ, ಸಂಜು ಮಡಿಕೇರಿ ದ್ವಿತೀಯ, ಡಿಎಆರ್ ನ ವಿಜಯ್ ತೃತೀಯ ಬಹುಮಾನ ಗಳಿಸಿದರು.

ಮಹಿಳೆಯರಿಗೆ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭವ್ಯ ಮಡಿಕೇರಿ ಪ್ರಥಮ, ರೇಣುಕ ವಿಶೇಷ ಘಟಕ ದ್ವಿತೀಯ, ಶಶಿಕಲಾ ವಿಶೇಷ ಘಟಕ ತೃತೀಯ ಬಹುಮಾನ ಗಳಿಸಿದರು.

ರಿಲೇ ಓಟದ ಸ್ಪರ್ಧೆಯಲ್ಲಿ ಮಡಿಕೇರಿ ವಿಶೇಷ ಘಟಕ ಪ್ರಥಮ, ಡಿಎಆರ್ ದ್ವಿತೀಯ ಬಹುಮಾನ ಪಡೆಯಿತು.

ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಹಿಳೆಯರ ವಿಶೇಷ ಘಟಕ ಪ್ರಥಮ ಹಾಗೂ ಮಡಿಕೇರಿ ಉಪ‌ ವಿಭಾಗ ದ್ವಿತೀಯ ಬಹುಮಾನ ಗಳಿಸಿತು. ಪುರುಷರಿಗೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸೋಮವಾರಪೇಟೆ ಉಪ ವಿಭಾಗ ಪ್ರಥಮ ಹಾಗೂ ಡಿಎಆರ್ ಘಟಕ ದ್ವಿತೀಯ ಸ್ಥಾನ ಪಡೆಯಿತು.