ಸಾರಾಂಶ
ವಿಶೇಷ ವರದಿ
ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಡಿ. 4ರಂದು ಚುನಾವಣೆ ಜರುಗಲಿದ್ದು, ಎರಡು ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿದೆ.ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಅಧೀಕ್ಷಕ ಎಂ.ಎ. ಆಸೀಫ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಆರ್.ಎಚ್. ಲೋಕೇಶ್ ನಡುವೆ ಹಣಾಹಣಿಯಿದೆ.
ಖಜಾಂಚಿ ಸ್ಥಾನಕ್ಕೆ ಜಿಲ್ಲಾಸ್ಪತ್ರೆಯ ನರ್ಸಿಂಗ್ ವಿಭಾಗದ ಹನುಮಂತರಾಯ ಹಾಗೂ ತಾಲೂಕು ಪಂಚಾಯಿತಿಯ ಮುಖ್ಯ ಅಕೌಂಟೆಂಟ್ ಶರಣಪ್ಪ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಕಂದಾಯ ಇಲಾಖೆಯ ಎಂ. ಸುರೇಶ್ ಕುಮಾರ್ ಹಾಗೂ ಡಿಡಿಪಿಐ ಕಚೇರಿಯ ಎಫ್‌ಡಿಎ ಮಹಾಂತೇಶ್ ಅವರ ನಡುವೆ ಜಿದ್ದಾಜಿದ್ದಿಯಿದೆ.ಇದೇ ಮೊದಲ ಬಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ರಾಜಕೀಯ ಪಕ್ಷಗಳಿಗೂ ಮೀರಿಸುವಂತೆ ರಾಜಕೀಯ ಅಬ್ಬರ ನಡೆದಿದೆ. ಒಟ್ಟು 68 ಜನ ಮತದಾನ ಹಕ್ಕು ಹೊಂದಿದ್ದಾರೆ.
ಗೋವಾ ಟ್ರಿಪ್, ನಿತ್ಯಪಾರ್ಟಿಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಜಿದ್ದಾಜಿದ್ದಿ ಗೋವಾ ಟ್ರಿಪ್, ನಿತ್ಯ ಗುಂಡು ಪಾರ್ಟಿಗೆ ಆಸ್ಪದ ಒದಗಿಸಿದೆ. ಕೆಲವರಿಗೆ ನಗದು ಹಣವನ್ನು ನೀಡಿ ತಮ್ಮ ಪರ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನೌಕರರ ಸಂಘಕ್ಕೆ ಈಚೆಗೆ ಜರುಗಿದ ನಿರ್ದೇಶಕರ ಚುನಾವಣೆಯಲ್ಲಿ ಗೆದ್ದ ನೌಕರರು ಹಾಗೂ ತಾಲೂಕು ಘಟಕದ ಅಧ್ಯಕ್ಷರು ಮತದಾನ ಮಾಡಲಿದ್ದಾರೆ.ನಿರ್ದೇಶಕರನ್ನು ಹಿಡಿದಿಟ್ಟುಕೊಳ್ಳಲು ಸಂಘದ ಒಂದು ಬಣ 30 ಜನರನ್ನು ಗೋವಾ ಟ್ರಿಪ್ ಕಳಿಸಿಕೊಟ್ಟಿದ್ದು, ತಂಡ ಮಂಗಳವಾರ ಬಳ್ಳಾರಿಗೆ ಬಂದಿಳಿದಿದೆ. ಇನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ದಿನದಿಂದಲೇ ಗುಂಡುಪಾರ್ಟಿ ನೀಡಲಾಗುತ್ತಿದೆ ಎಂದು ನೌಕರರೇ ಹೇಳುತ್ತಿದ್ದಾರೆ.
ನೌಕರರ ಸಂಘದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನೌಕರ ವಲಯದಲ್ಲಿಯೇ ತೀವ್ರ ಅಸಮಾಧಾನ ಕಂಡು ಬಂದಿದೆ. ಸರ್ಕಾರಿ ನೌಕರರು ಸಂಜೆ ಕಚೇರಿ ಕೆಲಸ ಮುಗಿಯುತ್ತಿದ್ದಂತೆಯೇ ಚುನಾವಣೆಯ ಕುರಿತು ನಿತ್ಯ ಚರ್ಚಿಸುತ್ತಿದ್ದಾರೆ. ಆ ಬಣದವರು ಯಾರನ್ನು ಸಂಪರ್ಕಿಸಿದರು? ಗೆಲುವಿಗೆ ಏನು ತಂತ್ರ ರೂಪಿಸಿಕೊಳ್ಳುತ್ತಿದ್ದಾರೆ? ಈ ಬಣದವರು ಮತ್ಯಾವ ತಂತ್ರ ರೂಪಿಸಿಕೊಂಡಿದ್ದಾರೆ ಎಂಬಿತ್ಯಾದಿ ಚರ್ಚೆಗಳೇ ಮುನ್ನಲೆಗೆ ಬಂದಿವೆ.ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಸಂಘದ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಸಂಜೆ 6ರ ವೇಳೆಗೆ ಫಲಿತಾಂಶ ಹೊರಬೀಳಲಿದೆ.