ಜ. 28ರಂದು ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ

| Published : Jan 04 2024, 01:45 AM IST

ಜ. 28ರಂದು ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜ. ೨೮ರಂದು ನಡೆಸಲು ತೀರ್ಮಾನಿಸಲಾಗಿದೆ. ಜ. ೨೮ರ ಇಡೀ ದಿನ ಕಾರ್ಯಕ್ರಮ ನಡೆಯಲಿದೆ.

ಶಿರಸಿ:

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜ. ೨೮ರಂದು ನಡೆಸಲು ತೀರ್ಮಾನಿಸಲಾಗಿದೆ. ಬುಧವಾರ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಯಿತು.

ಜ. ೨೮ರ ಇಡೀ ದಿನ ಕಾರ್ಯಕ್ರಮ ನಡೆಯಲಿದ್ದು, ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ, ಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿ, ಅಜ್ಜೀಬಳ ದತ್ತಿನಿಧಿ ಪುರಸ್ಕಾರ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲು ಯೋಜಿಸಲಾಯಿತು. ಅಂದು ಸಂಜೆ ಮನರಂಜನಾ ಕಾರ್ಯಕ್ರಮ ಹಾಗೂ ಪತ್ರಕರ್ತರು ಹಾಗೂ ಕುಟುಂಬದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಸಲು ಸಭೆ ಒಪ್ಪಿಗೆ ಸೂಚಿಸಿತು.

ಇದೇ ವೇದಿಕೆಯಲ್ಲಿ ಪತ್ರಕರ್ತರ ಕ್ಷೇಮನಿಧಿ ಕೂಪನ್, ಸುವರ್ಣ ಸಂಭ್ರಮ ಒಂದು ವರ್ಷದ ಕಾರ್ಯಕ್ರಮದ ಲೊಗೋ ಲೋಕಾರ್ಪಣೆ, ಸಂಘದ ಸದಸ್ಯರ ಯಾದಿ ಒಳಗೊಂಡ ಕ್ಯಾಲೆಂಡರ್, ಒಂದು ವರ್ಷದ ಆಯಾ ತಾಲೂಕು ಕಾರ್ಯಕ್ರಮದ ಯಾದಿ ಬಿಡುಗಡೆ ನಡೆಯಲಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ತಾಲೂಕಿನಲ್ಲೂ ತಿಂಗಳಿಗೊಂದು ಕಾರ್ಯಕ್ರಮ ನಡೆಸುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಪ್ರದೀಪ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಕಾರ್ಯಕಾರಿಣಿ ಸದಸ್ಯರಾದ ಯು.ಎಸ್. ಪಾಟೀಲ, ಪ್ರಭಾವತಿ ಜಯರಾಜ್, ಶಾಂತೇಶಕುಮಾರ ಬೆನಕನಕೊಪ್ಪ, ವಿದ್ಯಾಧರ ಮೊರಬಾ, ಕೃಷ್ಣಮೂರ್ತಿ ಕೆರೆಗದ್ದೆ, ರಾಘವೇಂದ್ರ ಬೆಟ್ಟಕೊಪ್ಪ ಉಪಸ್ಥಿತರಿದ್ದರು.