ಜಿಲ್ಲಾ ಪ್ರಾಥಮಿಕ ಸುರಕ್ಷಾಧಿಕಾರಿಗಳ ಸಂಘ ಸಭೆ

| Published : Oct 01 2024, 01:32 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಸಭೆ ನಗರದ ನಂದಿನಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಸಭೆ ನಗರದ ನಂದಿನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಆರೋಗ್ಯ ಸುರಕ್ಷಾಧಿಕಾರಿಗಳ ಸೇವೆ ಶ್ಲಾಘನೀಯ. ಯಾವುದೇ ಮೂಲಭೂತ ಸೌಕರ್ಯಗಳಿರದ ಹಿಂದಿನ ದಿನಗಳಲ್ಲಿ ಆರೋಗ್ಯ ಸುರಕ್ಷಾಧಿಕಾರಿಗಳು ಗರ್ಭಿಣಿ ಮಹಿಳೆಯರು ಇರುವ ಮನೆಗಳಿಗೆ ಭೇಟಿ ನೀಡಿ ಹೆರಿಗೆ ಮಾಡಿಸುತ್ತಿದ್ದರು. ಒಂದು ರೀತಿಯಲ್ಲಿ ಅವರು ತಾಯಂದಿರ ಸ್ವರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಲೇಡಿಗೋಶನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ ಮಾತನಾಡಿ, ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುವ ಎಎನ್‌ಎಂ ನರ್ಸ್‌ಗಳ ಸೇವೆಯನ್ನು ಪ್ರತಿ ಸಂದರ್ಭದಲ್ಲೂ ನೆನಪಿಸಿಕೊಳ್ಳಬೇಕು. ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ಊರಿನ ಜನರ ಯೋಗಕ್ಷೇಮ ನೋಡಿಕೊಳ್ಳುವ ಅವರು ನಿಜವಾದ ಅರ್ಥದಲ್ಲಿ ತಾಯಂದಿರಾಗಿದ್ದಾರೆ. ಮೂಲಭೂತ ಸೌಕರ್ಯಗಳಿರದ ಹಿಂದಿನ ದಿನಗಳಲ್ಲಿ ಅಪರಾತ್ರಿಯಲ್ಲಿ ಕೂಡ ಮನೆ ಬಾಗಿಲು ಬಡಿದು ಎಬ್ಬಿಸಿದರೆ, ತಕ್ಷಣ ಹೋಗಿ ಹೆರಿಗೆ ಮಾಡಿಸುವ ಕಾಲ ಘಟ್ಟದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷೆ ಚಂದ್ರಿಕಾ ಧಮ್ಮಳ್ಳಿ ಮಾತನಾಡಿ, ಆರೋಗ್ಯ ಸುರಕ್ಷಾಧಿಕಾರಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಬೇಡಿಕೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿದೆ ಎಂದರು.

ನಿವೃತ್ತ ಹಿರಿಯ ಆರೋಗ್ಯ ಸುರಕ್ಷಾಧಿಕಾರಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಮಂಗಳೂರು ಟಿ.ಎಚ್.ಒ ಡಾ.ಸುಜಯ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ರಾವ್, ನಿವೃತ್ತ ಮಾಜಿ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ, ಡಿಎಚ್‌ಇಒ ಜ್ಯೋತಿ, ದ.ಕ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ದೀಪಾ, ಖಜಾಂಚಿ ಶಾಲಿನಿ, ಗೌರವಾಧ್ಯಕ್ಷೆ ಇಂದಿರಾ ಇದ್ದರು.