ಸಾರಾಂಶ
ರೋಣ: ಐತಿಹಾಸಿಕ ನಾಡು ಗಜೇಂದ್ರಗಡ ಪಟ್ಟಣದಲ್ಲಿ ಫೆ. 24, ಮತ್ತು 25ರಂದು ಜರುಗುವ ಗದಗ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಜರುಗುವ ದಿಶೆಯಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳ, ಸಿಬ್ಬಂದಿ ಪಾತ್ರ ಅತೀ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಸಲಹೆ ನೀಡಿದರು.ಅವರು ಗುರುವಾರ ಸಾಯಂಕಾಲ ಪಟ್ಟಣದ ತಾಪಂ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜರುಗಿದ ಗಜೇಂದ್ರಗಡ ಮತ್ತು ರೋಣ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಹಿತ್ಯ ಸಮ್ಮೇಳನವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಇದೊಂದು ಕೇವಲ ಸಾಹಿತ್ಯ ಸಮ್ಮೇಳನ ಆಗದೇ ಜನರಲ್ಲಿ ಸಾಹಿತ್ಯ, ಸಂಸ್ಕೃತಿ ಜಾಗೃತಿ ಮೂಡಿಸುವ, ಕೃಷಿ, ಸಂಗೀತ ಮುಂತಾದ ಕ್ಷೇತ್ರದ ಜ್ಞಾನ ಸುಧೆ ಸಿಗುವಂತಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಅಧಿಕಾರಿಗಳು ಮತ್ತು ಸಿಬ್ಬಂದಿ, ಜನಪ್ರತಿನಿಧಿಗಳು, ಸಾಹಿತ್ಯ ಆಸಕ್ತರು, ಅಭಿಮಾನಿಗಳು, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹೀಗೆ ಪ್ರತಿಯೊಬ್ಬರ ಜವಾಬ್ದಾರಿ ಅತೀ ಮುಖ್ಯವಾಗಿದೆ. ಎಲ್ಲರೂ ಪರಸ್ಪರ ಚರ್ಚಿಸಿ, ಸಹಭಾಗಿತ್ವದಿಂದ ಭಾಗವಹಿಸಿ, ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟುತನದಿಂದ ನಿಭಾಯಿಸಿ, ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಗೌಡ ಪಾಟೀಲ ಮಾತನಾಡಿ, ಸಮ್ಮೇಳನವು ಪ್ರತಿ ವರ್ಷ 2 ದಿನ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ 3 ದಿನ ಹಮ್ಮಿಕೊಳ್ಳಬೇಕು ಎಂಬ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜ. 23 ರಂದು ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮಭೂಮಿ ಜಕ್ಕಲಿ ಗ್ರಾಮದಿಂದ ಕನ್ನಡ ಜ್ಯೋತಿ ಮತ್ರು ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆಯನ್ನು ಜಕ್ಕಲಿಯಿಂದ ಗಜೇಂದ್ರಗಡವರೆಗೆ ಹಮ್ಮಿಕೊಳ್ಳಲಾಗುವದು. ಜಕ್ಕಲಿಯಿಂದ ನರೇಗಲ್ಲ, ನಿಡಗುಂದಿ ಮಾರ್ಗವಾಗಿ ಗಜೇಂದ್ರಗಡ ತಲುಪಲಿದೆ. ಕನ್ನಡ ಜಾತ್ರೆಯನ್ನು ಅರ್ಥಪೂರ್ಣವಾಗಿ, ಇಂದಿನ ತೆಲೆಮಾರಿಗೆ ಸಾಹಿತ್ಯ, ಸಂಸ್ಕೃತಿ ಸವಿರುಚಿಯನ್ನು ಉಣಬಡಿಸುವ ಉದ್ದೇಶವಿದೆ.ಯುವಕರಿಗೆ ಸ್ಫೂರ್ತಿದಾಯಕವಾಗಿ ಸಮ್ಮೇಳನ ನಡೆಯಬೇಕಿದೆ ಎಂದರು.ಕುಂಭ ಮೇಳ ಜವಾಬ್ದಾರಿ ಸಿಡಿಪಿಒ ಇಲಾಖೆಗೆ, ಮೆರವಣಿಗೆಯಲ್ಲಿ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳು, ಮಕ್ಕಳಿಂದ ಮಹನೀಯರ ವೇಷಭೂಷಣ ಹಾಕಿಸುವುದು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಜವಾಬ್ದಾರಿಯನ್ನು, ಸಮ್ಮೇಳನ ಸಂಪೂರ್ಣ ಯಶಸ್ವಿ ಮತ್ತು ಅರ್ಥಪೂರ್ಣವಾಗಿ ಜರುಗಲು ಬಿಇಒ, ಪುರಸಭೆ, ಕೃಷಿ ತೋಟಗಾರಿಕೆ, ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಕೆಇಬಿ, ಕಂದಾಯ, ಗ್ರಾಪಂ, ತಾಪಂ, ಜಿಪಂ ,ರೇಷ್ಮೆ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಯೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಬೇಕೆಂದು ಆಯಾ ಇಲಾಖೆಗೆ ವಹಿಸಲಾಯಿತು. ಸಭೆಯಲ್ಲಿ ರೋಣ ತಹಸೀಲ್ದಾರ್ ನಾಗರಾಜ ಕೆ., ಗಜೇಂದ್ರಗಡ ತಹಸೀಲ್ದಾರ್ ರಜನಿಕಾಂತ ಕೆಂಗೇರಿ, ರೋಣ ತಾಪಂ ಇಒ ರವಿ ಎ.ಎನ್., ಸಿದ್ದಣ್ಣ ಬಂಡಿ, ಪರಶುರಾಮ ಅಳಗವಾಡಿ, ಗಜೇಂದ್ರಗಡ ತಾಒಂ ಇಒ ಡಾ. ಡಿ.ಮೋಹನ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ , ಬಿಇಒ ರುದ್ರಪ್ಪ ಹುರಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.