ಸಾರಾಂಶ
ಜನಸಂಪರ್ಕ ಸಭೆಯಲ್ಲಿ ಅರ್ಜಿ ಸ್ವೀಕರಿಸಿ, ಪರಿಶೀಲಿಸುವಂತೆ ಭರವಸೆ
ಕನ್ನಡಪ್ರಭ ವಾರ್ತೆ ಕೊರಟಗೆರೆತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಸಭೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕರು, ಮುಖಂಡರು ಹಾಗೂ ರೈತರು ತಮ್ಮ ಅಹವಾಲುಗಳನ್ನು ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ. ಅವರಿಗೆ ನೀಡಿದರು. ಇದರಲ್ಲಿ ಬಹತೇಕ ಜಮೀನು ವಿವಾದ, ದಾರಿ, ವಾರಸತ್ವದ ಬಗ್ಗೆ ದೂರುಗಳಿದ್ದವು. ಈ ದೂರು ತಂದವರಲ್ಲಿ ಹೆಚ್ಚಿನವರು ವಯೋವೃದ್ಧರಿದ್ದರು. ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾ ಎಸ್‌ಪಿ, ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ರೈತರು ಕೆಲವು ತಿಂಗಳುಗಳಿಂದ ಕೋಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಬೋರ್‌ವೆಲ್ ಪಂಪ್‌ಸೆಟ್‌ನ ಕೇಬಲ್ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕರು ಸರಗಳ್ಳತನದ ಬಗ್ಗೆ ದೂರು ನೀಡಿದರು.
ಸಭೆಯಲ್ಲಿ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು, ಕೋಳಾಲ ಬಸ್ಟಾಂಡ್ ಅನಧಿಕೃತ ಅಂಗಡಿ, ರಸ್ತೆ ಬದಿ ವ್ಯಾಪಾರದಿಂದ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಒಂದೇ ವಿಷಯದ ಸಿವಿಲ್ ವಿವಾದಗಳಿಗೆ ಪದೆ ಪದೆ ದಾಖಲು ಮಾಡದಂತೆ ಹಲವು ಸಮಸ್ಯೆಗಳನ್ನು ಜನರು ವರಷ್ಠಾಧಿಕಾರಿಗಳ ಬಳಿ ಹೇಳಿಕೊಂಡರು.ಈ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು. ವಿಚಿತ್ರವೇನೆಂದರೆ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇಬ್ಬರು ಗ್ರಾಮಸ್ಥರು ನಮಗೆ ಸರ್ಕಾರಿ, ಸಾರ್ವಜನಿಕ ಮತ್ತು ಪೊಲೀಸ್ ಠಾಣೆಯಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಅವಕಾಶದ ಬಗ್ಗೆ ಅರ್ಜಿಸಲ್ಲಿಸಿದ್ದರು.
ಅಹವಾಲು ಪರಿಶೀಲಸಿದ ಜಿಲ್ಲಾ ಎಸ್‌ಪಿ ಅವರು ಮಾತನಾಡಿ, ಮೊಬೈಲ್ ವಿಡಿಯೋಗಳಿಗೂ ಕೆಲವು ನಿಬಂದನೆ ಇರುತ್ತವೆ. ಅದನ್ನು ಎಲ್ಲರೂ ಪಾಲಿಸಬೇಕು. ಇಲ್ಲದ್ದಿದ್ದಲ್ಲಿ ಕಾನೂನು ನಿಯಮ ಉಲ್ಲಂಘನೆಯಾಗುತ್ತದೆ ಎಂದರು.ಸಾರ್ವಜನಿಕರು ನಿರ್ಭಯವಾಗಿ ಠಾಣೆಗಳಿಗೆ ಬರುವಂತೆ ಕರೆ ನೀಡಿದರು. ದೂರುದಾರರಿಗೆ ಪ್ರಮಾಣಿಕವಾಗಿ ನ್ಯಾಯ ಒದಗಿಸುವಂತೆ ಪೊಲೀಸರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಲಾಗುತ್ತಿದೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಇಂದು 10 ಅರ್ಜಿ ಬಂದ್ದಿದೆ. ಅವುಗಳು ಮತ್ತು ಹಲವು ದೂರುಗಳ ಬಗ್ಗೆ ಗಮನ ಹರಿಸಿದ್ದು, ಕೇಬಲ್ ಕಳ್ಳತನ ತಡೆಯಲು ಬೀಟ್ ಪೊಲೀಸ್ ಚುರುಕು ಗೊಳಿಸಲಾಗುವುದು. ಸರಗಳ್ಳತನ ತಡೆಯಲು ವಿವಿಧ ಜಿಲ್ಲೆಗಳ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.ಜನಸಂಪರ್ಕ ಸಭೆಯಲ್ಲಿ ಸಿಪಿಐ ಆರ್.ಪಿ. ಅನಿಲ್, ಪಿಎಸ್‌ಐ ಟಿ.ಕೆ. ಯೋಗೀಶ್, ಎಎಸ್‌ಐಗಳಾದ ಪರಮೇಶ್ವರ, ಜಯರಾಮ್ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.ಫೋಟೊಕೋಳಾಲ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆಯನ್ನು ನಡೆಸುತ್ತಿರುವ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್.