ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಜೀವನದ ಪ್ರತಿಹಂತದಲ್ಲೂ ಗಣಿತ ಬೇಕು. ಬದುಕು ರೂಪಿಸಿಕೊಳ್ಳಲು, ಸಮಸ್ಯೆಗಳ ಪರಿಹಾರಕ್ಕೆ, ನಿರ್ಧಾರ ತೆಗೆದು ಕೊಳ್ಳಲು, ಆಟ ಪಾಠದಲ್ಲಿ, ಹೀಗೆ ಎಲ್ಲಾ ಹಂತದಲ್ಲೂ ಗಣಿತ ಅವಶ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.ತಾಲೂಕಿನ ಸಿದ್ದಾಪೂರ ಗ್ರಾಮದ ಪುಷ್ಪಾತಾಯಿ ಕನ್ನಡ ಮಾಧ್ಯಮ ಪದವಿಪೂರ್ವ ಕಾಲೇಜಿನಲ್ಲಿ ಜಿಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ಗಣಿತ ಶಿಕ್ಷಕರಿಗೆ ಶುಕ್ರವಾರ ನಡೆದ ಸಾಮರ್ಥ್ಯ ವೃದ್ಧಿಸುವ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗಣಿತ ವಿಷಯ ಮಾತ್ರವಲ್ಲ, ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನ ಸಾರ್ಥಕತೆಗೆ ಎಲ್ಲರೂ ಗಣಿತ ಕಲಿಯಬೇಕು. ಕಲಿಸುವರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಉತ್ತೀರ್ಣರಾಗುವಂತೆ ಮಾಡುವುದು ಮುಖ್ಯ. ಆಸಕ್ತಿ ಮೂಡುವಂತೆ ಕಲಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಮನವರಿಕೆ ಮಾಡಬೇಕು. ಶಾಲೆಗಳಲ್ಲಿ ಗಣಿತ ಕಷ್ಟದ ವಿಷಯ ಎಂದು ವಿದ್ಯಾರ್ಥಿಗಳು ಹೇಳದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜಿಲ್ಲೆಯ 10ನೇ ತರಗತಿ ಫಲಿತಾಂಶ ಸುಧಾರಿಸಬೇಕು. 13ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಕನಿಷ್ಠ 10ನೇ ಸ್ಥಾನಕ್ಕಾದರು ಬರುವಂತೆ ಎಲ್ಲ ಶಿಕ್ಷಕರು ಶ್ರಮವಹಿಸಬೇಕು ಎಂದು ಹೇಳಿದರು.
ಬಿಇಒ ಎ.ಕೆ.ಬಸಣ್ಣವರ ಮಾತನಾಡಿ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ ಫಲಿತಾಂಶ ಹೆಚ್ಚಿಸಲು ಶ್ರಮ ಪಟ್ಟರೆ ಸಾಲದು ಶಿಕ್ಷಕರ ಸಹಕಾರವು ಬೇಕು ಎಂದು ಹೇಳಿದರು. ಶಿಕ್ಷಕರು ಸಿದ್ಧತೆ ಮಾಡಿಕೊಂಡು ಪಾಠ ಹೇಳಬೇಕು. ಬರೀ ಅಂಕಿ ಅಂಶ ನೀಡುವುದು ಬೇಡ. ಫಲಿತಾಂಶ ಬೇಕು. ನೂರಕ್ಕೆ ನೂರರಷ್ಟು ಫಲಿತಾಂಶ ತಂದು ಕೊಟ್ಟರೆ ಜಿಲ್ಲೆಯ ಎಲ್ಲಾ ಗಣಿತ ಶಿಕ್ಷಕರಿಗೂ ಇಲಾಖೆಯಿಂದ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.ಡಿಡಿಪಿಐ ವಿವೇಕಾನಂದ ಮಾತನಾಡಿ, ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಚನ್ನಾಗಿ ಬರಬೇಕು ಎಂದು ಇಲಾಖೆಯಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಗಣಿತ ವಿಷಯದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ತರಬೇತಿ ನೀಡಬೇಕು. ಜಿಲ್ಲಾಧಿಕಾರಿ, ಸಿಇಒ ಹೆಚ್ಚಿನ ಕಾಳಜಿ ವಹಿಸಿ ಜಿಲ್ಲೆಯ ಶಿಕ್ಷಣ ಮಟ್ಟ ಸುಧಾರಣೆಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 36 ಸಾವಿರ ವಿದ್ಯಾರ್ಥಿಗಳ ಪೈಕಿ ಕೇಲವ 34 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದಾರೆ. ಉಳಿದ 2 ಸಾವಿರ ಮಕ್ಕಳು ಏಕೆ ಪರೀಕ್ಷೆ ಬರೆಯುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಅಗತ್ಯ ಕ್ರಮ ಜರುಗಿಸಿ ಪರಿಕ್ಷೆ ಬರೆಯಲು ಪ್ರೋತ್ಸಾಹಿಸಬೇಕು ಎಂದು ಸೂಚನೆ ನೀಡಿದರು.
ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಮಾತನಾಡಿ, ಶಿಕ್ಷಣಕ್ಕೆ ಪ್ರತಿಯೊಬ್ಬರು ಮಹತ್ವ ನೀಡಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ಕಲಿಕೆಗೆ ಅವಕಾಶವಿದೆ ಅದರ ಸದುಪಯೋಗವಾಗಬೇಕು. ಮಕ್ಕಳಲ್ಲಿ ಕಲಿಕೆ ಅಭಿರುಚಿ ಮೂಡುವಂತೆ ಶಿಕ್ಷಕರು ಕಲಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಸಮೃದ್ಧವಾಗುತ್ತದೆ. ದೇಶದ ಸುಭದ್ರ ಭವಿಷ್ಯಕ್ಕೆ ಮಕ್ಕಳನ್ನು ಸಿದ್ಧಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹತ್ತಾರು ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ತರಬೇತಿ ನಡೆಸಲಾಗಿದೆ. ಕಳೆದ ವರ್ಷ ರಾಜ್ಯಕ್ಕೆ 13 ನೇ ಸ್ಥಾನದಲ್ಲಿ ಇರುವ ಬಾಗಲಕೋಟೆ ಜಿಲ್ಲೆ 10ನೇ ಸ್ಥಾನಕ್ಕೆ ತರುವ ಪ್ತಯತ್ನ ನಡೆದಿದೆ ಎಂದು ಹೇಳಿದರು. ಜಿಲ್ಲೆಯ 400 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದು, ಉಡುಪಿ ಹರೀಶ ಹೊಳ್ಳ ಹಾಗೂ ಬೆಳ್ತಂಗಡಿ ಯಾಖೂಬ್ ತರಬೇತಿ ನೀಡುತ್ತಿದ್ದಾರೆ. ತಂತ್ರಜ್ಞಾನದ ಬಳಕೆ ಸುಲಭ ಸೂತ್ತಗಳು, ಸರಳ ಕಲಿಕೆ ವಿಧಾನ ತಿಳಿಸಿಕೊಟ್ಟಿದ್ದಾರೆ ಎಂದರು. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಬೇಕು ಎಂಬ ಗುರಿಯಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಶಿಕ್ಷಕರು ತಮ್ಮ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಪಾಠಮಾಡುವ ಮೂಲಕ ಜಿಲ್ಲೆಯ ಹೆಸರು ತರಲು ಶ್ರಮಿಸಬೇಕೆಂದರು.
ಶಿಕ್ಷಕರಿಂದ ಸಿದ್ಧಪಡಿಸಲಾದ ಪುಸ್ತಕ ಬಿಡುಗಡೆ ಗೊಳಿಸಲಾಯಿತು. ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ವೈ.ಬಿ.ಹೊಟ್ಟಿ, ನಿರ್ದೇಶಕಿ ಪಾರ್ವತಿ ಗುಡಗುಂಟಿ, ಪಾಚಾರ್ಯ ಕೆ.ವೈ.ಭೂತಾಳಿ, ಶಾಲಾ ನಿರ್ದೇಶಕ ಎಸ್.ಎಸ್.ಹೂಲಿ, ತಾಪಂ ಸಿಇಓ ಸಂಜೀವ ಜುನ್ನೂರ, ಎಸ್.ಎಚ್.ಹಾಲನವರ ಇದ್ದರು. ಎಸ್.ಎಂ,ಹಲ್ಯಾಳ ವಂದಿಸಿದರು.