ದೊಡ್ಡಬಳ್ಳಾಪುರಕ್ಕೆ ಜಿಲ್ಲಾ ಕ್ರೀಡಾಂಗಣ, ದೇವನಹಳ್ಳಿಗೆ ಮೆಟ್ರೋ

| Published : Mar 08 2025, 12:32 AM IST

ದೊಡ್ಡಬಳ್ಳಾಪುರಕ್ಕೆ ಜಿಲ್ಲಾ ಕ್ರೀಡಾಂಗಣ, ದೇವನಹಳ್ಳಿಗೆ ಮೆಟ್ರೋ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹು ನಿರೀಕ್ಷಿತ ಯೋಜನೆಗಳಿಗೆ ಯಾವುದೇ ಅನುದಾನ ದೊರೆತಿಲ್ಲ.

ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹು ನಿರೀಕ್ಷಿತ ಯೋಜನೆಗಳಿಗೆ ಯಾವುದೇ ಅನುದಾನ ದೊರೆತಿಲ್ಲ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 4 ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಜಿಲ್ಲಾ ಕೇಂದ್ರದ ನಿರೀಕ್ಷೆಯಲ್ಲಿದ್ದ ಉಪವಿಭಾಗ ಕೇಂದ್ರವೂ ಆಗಿರುವ ದೊಡ್ಡಬಳ್ಳಾಪುರದಲ್ಲಿ ಈ ಹಿಂದೆಯೇ ಪ್ರಸ್ತಾಪವಾಗಿದ್ದ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಘೋಷಿಸಿದೆ. ಉಳಿದಂತೆ ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಿಗೆ ಯಾವುದೇ ಮಹತ್ವದ ಯೋಜನೆಗಳು ಪ್ರಕಟವಾಗಿಲ್ಲ.

ಪ್ರಸ್ತುತ ಬಜೆಟ್‌ನಲ್ಲಿ ಹತ್ತಾರು ನಿರೀಕ್ಷೆಗಳು ಕೈಗೂಡಲಿವೆ ಎಂಬ ಮಹತ್ವಾಕಾಂಕ್ಷಿ ಹೊಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಈ ಮೂಲಕ ಬಜೆಟ್ ಮಿಶ್ರಫಲ ನೀಡಿದೆ. ಜಿಲ್ಲೆಯ ಬಹುನಿರೀಕ್ಷಿತ ಯೋಜನೆಗಳ ಪ್ರಸ್ತಾಪ ಇಲ್ಲದ ನಿರಾಸೆ ಒಂದೆಡೆಯಾದರೆ, ರಸ್ತೆ-ರೈಲು ಸಂಪರ್ಕ, ಮೂಲಸೌಕರ‍್ಯಗಳಿಗೆ ಒತ್ತು ನೀಡುವ ಕೆಲ ಭರವಸೆ ದೊರೆತಿರುವುದು ಜಿಲ್ಲೆಯ ಪಾಲಿಗೆ ಕೊಂಚ ಆಶಾಭಾವನೆ ಮೂಡಿಸಿದೆ.

2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿಗೆ ಕೆಲ ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ, ಉನ್ನತ ಶಿಕ್ಷಣ ಕೇಂದ್ರಗಳು, ಜಿಲ್ಲಾ ಕೇಂದ್ರ, ನೇಕಾರರ ಮಾರುಕಟ್ಟೆ ಸಂಕೀರ್ಣ, ಪುಷ್ಪಕೃಷಿ ಸಂಸ್ಥೆಗಳ ಸ್ಥಾಪನೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಆಶೋತ್ತರಗಳು ಪೂರ್ಣವಾಗಿ ಈಡೇರಿಲ್ಲ.

ಬಾಕ್ಸ್‌.......

ಬೆಂ.ಗ್ರಾ ಜಿಲ್ಲೆಗೆ ಘೋಷಣೆಯಾದ ಯೋಜನೆಗಳು:

1. ''''''''ನಮ್ಮ ಮೆಟ್ರೋ'''''''' ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದು, ಪ್ರಸ್ತುತ 68 ನಿಲ್ದಾಣಗಳನ್ನೊಳಗೊಂಡಂತೆ 79.65 ಕಿ.ಮೀ. ಮಾರ್ಗದ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು ಮೆಟ್ರೋ ಜಾಲ ದೇವನಹಳ್ಳಿವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

2. ದೇವನಹಳ್ಳಿಯಲ್ಲಿ 407 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಸಿಗ್ನೆಚರ್ ಬಿಸಿನೆಸ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಪಾಲಿನ ಅನುದಾನದಲ್ಲಿ 50 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.

3. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫಾಕ್ಸ್‌ಕಾನ್‌ ಸಂಸ್ಥೆಯಿಂದ ಮೊಬೈಲ್ ಫೋನ್‌ಗಳ ಉತ್ಪಾದನಾ ಘಟಕ 21,911 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭ. ಇದರಿಂದ 50,000 ಉದ್ಯೋಗ ಸೃಷ್ಟಿ ನಿರೀಕ್ಷೆ. ಈ ಕಂಪನಿಗೆ ಇಎಸ್‌ಡಿಎಂ ನೀತಿಯಡಿ 6,970 ಕೋಟಿ ಪ್ರೋತ್ಸಾಹಕ ನೀಡಲಾಗುವುದು.

4. 3,190 ಕೋಟಿ ಮೊತ್ತದ ದೇವನಹಳ್ಳಿ-ವಿಜಯಪುರ- ಎಚ್ ಕ್ರಾಸ್- ವೇಮಗಲ್- ಮಾಲೂರು - ತಮಿಳುನಾಡು ಗಡಿವರೆಗೆ ಕೈಗಾರಿಕಾ ಸಂಪರ್ಕ ಕಲ್ಪಿಸುವ 123 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಸಕ್ತ ಸಾಲಿನಲ್ಲಿ 30 ಕಿ.ಮೀ ರಸ್ತೆ ಪೂರ್ಣಗೊಳಿಸಲಾಗುವುದು.

5. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ಜಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರಮ್ ನಿರ್ಮಿಸಲಾಗುವುದು.

6. ವಿಪತ್ತು ಉಪಶಮನ ಕಾರ್ಯಕ್ರಮದಡಿ ಸಣ್ಣ ನೀರಾವರಿ ಇಲಾಖೆಯು 250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 41 ಕೆರೆ ತುಂಬಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ.

ರಾಜಧಾನಿಯ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈಗಾರಿಕಾಭಿವೃದ್ದಿ, ನಗರೀಕರಣ ಮತ್ತು ಕೃಷಿ, ನೇಕಾರಿಕೆಯ ಅಸ್ಥಿರತೆಯ ನಡುವೆ ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಬೆಂಗಳೂರಿಗೆ ರ‍್ಯಾಯವಾಗಿ ಬೆಳೆಯುತ್ತಿರುವ ಗ್ರಾಮಾಂತರ ಜಿಲ್ಲೆಗೆ ಅಗತ್ಯ ಮೂಲಸೌಕರ‍್ಯಗಳನ್ನು ಹೊಂದುವುದು ಸವಾಲಿನ ಕೆಲಸವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಹತ್ತರ ಯೋಜನೆಗಳನ್ನು ನಿರೀಕ್ಷಿಸಿತ್ತು. ಆದರೆ ಕೆಲ ವಿಚಾರಗಳಲ್ಲಿ ನಿರಾಶೆಯಾಗಿದೆ.

ಬಾಕ್ಸ್..........

ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ನಿರೀಕ್ಷೆಗಳು ಹುಸಿ!:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ನಿರೀಕ್ಷೆ ಹುಸಿಯಾಗಿದೆ. 7 ವರ್ಷಗಳ ಹಿಂದೆಯೇ ಮಂಜೂರಾದ ಜಿಲ್ಲಾಸ್ಪತ್ರೆ ಪ್ರಸ್ತಾವನೆಗೆ ಅಗತ್ಯ ಅನುದಾನ ಈ ಬಾರಿಯೂ ದೊರೆತಿಲ್ಲ. ಕುಡಿಯುವ ನೀರಿನ ಬವಣೆ ನಿವಾರಣೆಗೆ ಶಾಶ್ವತ ಯೋಜನೆ ಪ್ರಕಟಿಸಬೇಕು. ದಕ್ಷಿಣ ಕಾಶಿ ಶಿವಗಂಗೆ, ಮಾಕಳಿ ದುರ್ಗ ನಿಸರ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮಾಂತರ ಜಿಲ್ಲಾ ಪ್ರವಾಸಿ ಹಬ್ ನಿರ್ಮಾಣಕ್ಕೆ ಯೋಜನೆ ಜಾರಿಯಾಗಬೇಕು ಎಂಬುದೂ ಸೇರಿದಂತೆ ಹಲವು ನಿರೀಕ್ಷೆಗಳೂ ಹುಸಿಯಾಗಿವೆ.

ಸಬ್ ಅರ್ಬನ್ ರೈಲು ಯೋಜನೆಯನ್ನು ದೊಡ್ಡಬಳ್ಳಾಪುರದವರೆಗೆ ವಿಸ್ತರಣೆ ಮಾಡುವುದು, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಪಟ್ಟಣಗಳಿಗೆ ಮೆಮು ರೈಲು ಸಂಪರ್ಕ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ.

ಬಾಕ್ಸ್...............

ಜವಳಿ ಕ್ಷೇತ್ರಕ್ಕೆ ಸಮಾಧಾನ ತಂದ ಬಜೆಟ್:

ದೊಡ್ಡಬಳ್ಳಾಪುರ ಸೇರಿದಂತೆ ಬೆಂ.ಗ್ರಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯುತ್ ಮಗ್ಗ ನೇಕಾರರಿಗೆ ಬಜೆಟ್ ಅಲ್ಪ ಸಮಾಧಾನ ತಂದಿದೆ. ನೇಕಾರರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಿ ಉತ್ತೇಜನ ನೀಡಲು ಉಪಯೋಜನೆಗಳನ್ನು ಒಟ್ಟುಗೂಡಿಸಿ ನೇಕಾರರ ಪ್ಯಾಕೇಜ್ 2.0 ಪ್ರಕಟಿಸಲಾಗಿದೆ. ವಿದ್ಯುತ್‌ ಮಗ್ಗಗಳಿಗೆ 10 ಎಚ್‌ಪಿವರೆಗಿನ ಉಚಿತ ವಿದ್ಯುತ್‌ ಯೋಜನೆಯಡಿ 20 ಎಚ್‌ಪಿವರೆಗಿನ ಮಗ್ಗಗಳಿಗೆ ವಿಧಿಸಲಾಗಿದ್ದ ವಿದ್ಯುತ್‌ ಮಿತಿಯನ್ನು ಸಡಿಲಿಸಲಾಗಿದೆ. ಇದಕ್ಕಾಗಿ 100 ಕೋಟಿ ರು. ಅನುದಾನ ಒದಗಿಸಲಾಗಿದೆ.