ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಳೆಗರಿ ಮತ್ತು ಓಲೆಗರಿಗಳಲ್ಲಿ ಅಡಗಿ ಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು 20ನೇ ಶತಮಾನದಲ್ಲಿ ಸಂರಕ್ಷಿಸಿದ ಕೀರ್ತಿ ಡಾ.ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಜಿಲ್ಲಾ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವ ಬಳಗಗಳ ಸಂಯುಕ್ತಾಶ್ರಯದಲ್ಲಿ ಧರ್ಮಯ್ಯನಹುಂಡಿ ಗ್ರಾಮದಲ್ಲಿ ನಡೆದ ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಧರ್ಮದ ತಳಹದಿಯಾಗಿರುವ ಶರಣರ ವಚನಗಳು ಇಂದು ಜಾಗತಿಕ ಮನ್ನಣೆ ಪಡೆಯಲು ಹಳಕಟ್ಟಿಯವರವ ಕಾರ್ಯ ಕಾರಣ, ವಚನ ಗುಮ್ಮಟವೆನ್ನುವ ಬಿಎಲ್.ಡಿಇ ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಚನ ಶಾಸ್ತ್ರ ಪಿತಾಮಹರೆನಿಸಿದ ಹಳಕಟ್ಟಿ ಅವರು ಗಳಿಸುವ ವಕೀಲಿ ವೃತ್ತಿ ಬಿಟ್ಟು, ಹುಟ್ಟಿನಿಂದ ಶ್ರೀಮಂತರಾದರೂ ವಚನ ಸಂರಕ್ಷಣೆ ಮಾಡಿ ಸಾರ್ವಕಾಲಿಕ ಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು.ವಾಟಾಳು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜನರ ಬದುಕು ಹಸನಾಗಬೇಕಾದರೆ ಕಾಲಕಾಲಕ್ಕೆ ಇಂತಹ ಶರಣರ ಜಯಂತಿಗಳು ಹಾಗೂ ಸ್ಮರಣೆಗಳು ಮೇಲಿಂದ ಮೇಲೆ ಜರುಗಬೇಕು. ಸುತ್ತೂರು ವೀರಸಿಂಹಾಸನ ಪರಂಪರೆ ಪ್ರಸಕ್ತ ದಿನಮಾನಗಳಲ್ಲಿ ವಚನ ಸಾಹಿತ್ಯವನ್ನು ಉಳಿಸುವ ದೃಷ್ಟಿಯಿಂದ ಅದರಲ್ಲೂ ರಾಜೇಂದ್ರ ಶ್ರೀಗಳು ದತ್ತಿ ಸ್ಥಾಪಿಸುವ ಮೂಲಕ ಶರಣ ಸಂದೇಶಗಳನ್ನು ಹಳ್ಳಿಗಳಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರ ಹುಂಡಿ ಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ರಾಜೇಂದ್ರ ಶ್ರೀಗಳ ಕನಸಿನ ಕೂಸಾಗಿತ್ತು, ಅವರ ಒಳತೋಟಿಗೆ ಇಂಬು ಕೊಡುತ್ತಾ ಪ್ರಸ್ತುತ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ವಚನ ಸಾಹಿತ್ಯದ ಬಗೆಗಿನ ಅಭಿಮಾನ ಹಾಗೂ ಕಾಳಜಿಯಿಂದ ಎಲ್ಲ ಕಡೆಗಳಲ್ಲೂ ದತ್ತಿ ಸ್ಥಾಪನೆ ಮಾಡಿಸಿ ಸಕಾಲದಲ್ಲಿ ಬಸವಾದಿ ಶರಣರ ಸ್ಮರಣೆ ಮಾಡಿಸಲು ಅನುವು ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ ಎಂದರು.ಹೊಸೂರು ಹುಂಡಿ ಮಠದ ರಾಜಶೇಖರ ಸ್ವಾಮೀಜಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಪ್ರಕಾಶ್, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ, ಪ್ರಭು, ತಾಲೂಕು ಶಸಾಪ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಲಿಂಗರಾಜಪ್ಪ, ಶಿವಕುಮಾರ ಸ್ವಾಮಿ ಟ್ರಸ್ಟ್ ನ ಬಜ್ಜಿನಿಂಗಪ್ಪ, ಬಸವ ಪ್ರಚಾರಕ ಕುಮಾರ್, ಉಪಾಧ್ಯಕ್ಷ ಮಹದೇವಸ್ವಾಮಿ, ಚಿನ್ನಬುದ್ದಿ, ನಂಜುಂಡಸ್ವಾಮಿ, ಕುಮಾರಸ್ವಾಮಿ, ಕುಮಾರ್, ಚಂದ್ರಧರ, ಶಿವಕುಮಾರ್, ಚೇತನ್ ಪಟೇಲ್, ಗೌಡರಾದ ಗುರುಮಲ್ಲಪ್ಪ, ಮಹದೇವಪ್ಪ, ಶಿವಮೂರ್ತಿ, ಸತೀಶ, ಚೇತನ್, ವಕೀಲ ಜ್ಞಾನೇಂದ್ರಮೂರ್ತಿ, ನಾಗಪ್ಪ, ಪುಟ್ಟಪ್ಪ, ಸರಳ ಇದ್ದರು.