ಚಾಲಕರ ಒಕ್ಕೂಟದ ಜಿಲ್ಲಾ ಘಟಕ ಪ್ರತಿಭಟನೆ

| Published : Jul 25 2024, 01:19 AM IST

ಸಾರಾಂಶ

ರ್‍ಯಾಪಿಡೊ ಬೈಕ್ ಟ್ಯಾಕ್ಸಿಗಳು ಮತ್ತು ಇತರ ಇ-ಬೈಕ್ ಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿ ಇವುಗಳ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ರ್‍ಯಾಪಿಡೋ ಬೈಕ್ ಚಾಲಕರು ಮತ್ತು ಆಟೋ ಚಾಲಕರ ನಡುವಿನ ಘರ್ಷಣೆ ಇತ್ತೀಚೆಗೆ ಹೆಚ್ಚುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರದಲ್ಲಿ ಅನಧಿಕೃತವಾಗಿ ವೈಟ್ ಬೋರ್ಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದವರು ನಗರದ ಪಶ್ಚಿಮ ಆರ್.ಟಿ.ಒ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.

ನಗರದ ಲಕ್ಷ್ಮೀಪುರಂನ ಡಬಲ್ ಟ್ಯಾಂಕ್ ಬಳಿಯಿಂದ ಆರ್.ಟಿ.ಒ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಆರ್.ಟಿ.ಒ ಮುಂಭಾಗ ನೂರಾರು ಆಟೋಗಳೊಂದಿಗೆ ಜಮಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರ್‍ಯಾಪಿಡೊ ಬೈಕ್ ಟ್ಯಾಕ್ಸಿಗಳು ಮತ್ತು ಇತರ ಇ-ಬೈಕ್ ಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿ ಇವುಗಳ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ರ್‍ಯಾಪಿಡೋ ಬೈಕ್ ಚಾಲಕರು ಮತ್ತು ಆಟೋ ಚಾಲಕರ ನಡುವಿನ ಘರ್ಷಣೆ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೋವಿಡ್ ಸಮಯದಲ್ಲಿ ಆಟೋ ಚಾಲಕರು ಹೊಟ್ಟೆಗೂ ಕಷ್ಟಪಡುವ ಸ್ಥಿತಿಯನ್ನು ಅನುಭವಿಸಿದ್ದು, ಈಗ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ಹಲವರು ತಮ್ಮ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುತ್ತಿದ್ದು, ಆಟೋ ಚಾಲಕರ ಆದಾಯಕ್ಕೆ ಮತ್ತಷ್ಟು ಹೊಡೆತ ನೀಡಿದೆ. ದೇಶದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.

ಆಟೋ ಚಲಾಯಿಸುವ ಅಥವಾ ಕೊಂಡುಕೊಳ್ಳಲು ಚಾಲನಾ ಪರವಾನಗಿ ಜೊತೆ ಬ್ಯಾಡ್ಜ್ ಕಡ್ಡಾಯವಾಗಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಯ ಪರ್ಮಿಟ್ ಹೊಂದಿರುವ ವಾಹನಗಳನ್ನು ನಿಲ್ಲಿಸಬೇಕು. ನಗರದ ಆಟೋ ಆನ್ ಲೈನ್ ದರ ಪರಿಷ್ಕೃತಗೊಳಿಸಬೇಕು. ನಗರದಲ್ಲಿ 25 ಕಿ.ಮೀ. ರವರೆಗೆ ಅಂತರದ ಪರಿಮಿತಿಯನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಆರ್.ಟಿ.ಒ ಅಧಿಕಾರಿ ದೇವಿಕಾ ಮಾತನಾಡಿ, ರ್ಯಾಪಿಡೊ ವಾಹನಗಳ ಚಾಲನೆಯಿಂದ ಆಟೋ ಚಾಲಕರಿಗೆ ಅನಾನುಕೂಲವಾಗಿದೆ ಎಂದು ಮನವಿ ಕೊಟ್ಟಿದ್ದಾರೆ. ರ್ಯಾಪಿಡೊ ಕಂಪನಿಯವರು ಇದರ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾವು ಯಾವುದೇ ರೀತಿ ಕ್ರಮ ಜರುಗಿಸಲು ಆಗುವುದಿಲ್ಲ. ಆದರೂ, ಎಲೆಕ್ಟ್ರಿಕ್, ವೈಟ್ ಬೋರ್ಡ್ ವಾಹನಗಳನ್ನು ತಪಾಸಣೆ ಮಾಡಿ ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಜಿ. ಮುರುಗನ್, ನಗರಾಧ್ಯಕ್ಷ ಸತ್ಯನಾರಾಯಣಸಿಂಗ್, ಪದಾಧಿಕಾರಿಗಳಾದ ಪಿ. ವಿನಾಯಕ, ಶಿವಕುಮಾರ್, ಸುರೇಶ್, ರಹಮತ್ ಉಲ್ಲಾ, ಛಾಯಾ, ಸಿದ್ದರಾಜು, ಮಂಜೇಗೌಡ ಮೊದಲಾದವರು ಇದ್ದರು.