ತೈಲ ಬೆಲೆ ಏರಿಕೆ ವಿರುದ್ಧ ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ

| Published : Jun 21 2024, 01:04 AM IST

ತೈಲ ಬೆಲೆ ಏರಿಕೆ ವಿರುದ್ಧ ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಣ ಜಗಳದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಹದಗೆಟ್ಟುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ತೈಲ ಬೆಲೆ ಏರಿಕೆಯನ್ನು ಖಂಡಿಸಿದರು.

ಕಾರವಾರ: ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಗುರುವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರು. ರಸ್ತೆತಡೆ, ಟೈರ್‌ಗೆ ಬೆಂಕಿ, ಮಾನವ ಸರಪಳಿ ಮೂಲಕ ಗಮನ ಸೆಳೆದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ತೈಲ ಬೆಲೆ ಹೆಚ್ಚಳವನ್ನು ಖಂಡಿಸಿದ ಬಿಜೆಪಿ ಮುಖಂಡರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗ್ಯಾರಂಟಿಗಾಗಿ ಹಣ ಹೊಂದಿಸಲು ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರಿಗೆ ಇನ್ನಷ್ಟು ಹೊರೆ ಉಂಟುಮಾಡಲಾಗಿದೆ. ತೈಲ ಬೆಲೆ ಹೆಚ್ಚಳದಿಂದ ಎಲ್ಲ ಅಗತ್ಯ ವಸ್ತುಗಳ ದರಗಳಲ್ಲೂ ಹೆಚ್ಚಳ ಉಂಟಾಗಿ ಜನತೆ ಸಮಸ್ಯೆಯಲ್ಲಿ ಸಿಲುಕಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ಸರ್ಕಲ್ ಎದುರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಣ ಜಗಳದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಹದಗೆಟ್ಟುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ತೈಲ ಬೆಲೆ ಏರಿಕೆಯನ್ನು ಖಂಡಿಸಿದರು.

ಕಾರವಾರದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗರಾಜ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.

ಯಲ್ಲಾಪುರದಲ್ಲಿ ಹೆದ್ದಾರಿ ಹಾಗೂ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ಕೈಗೊಂಡು ಪ್ರತಿಭಟನೆ ನಡೆಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಉಮೇಶ ಭಾಗ್ವತ, ರಾಮು ನಾಯ್ಕ ಮತ್ತಿತರರು ಇದ್ದರು.

ಮುಂಡಗೋಡದಲ್ಲಿ ಚಕ್ಕಡಿಗಾಡಿ ಮೇಲೆ ಬೈಕ್ ಇಟ್ಟು ಅಣಕು ಪ್ರದರ್ಶನ ನಡೆಸಿದರು. ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಪ್ರತಿಭಟಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ರೇಖಾ ಅಂಡಗಿ ಮತ್ತಿತರರು ಪಾಲ್ಗೊಂಡಿದ್ದರು.

ಹಳಿಯಾಳದ ವನಶ್ರೀ ವೃತ್ತದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಯಿತು. ಮಂಗೇಶ ದೇಶಪಾಂಡೆ ಮತ್ತಿತರರು ಇದ್ದರು.

ಜೋಯಿಡಾದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಕ್ಷದ ಜೋಯಿಡಾ ಮಂಡಲ ಅಧ್ಯಕ್ಷ ಶಿವಾಜಿ ಗೋಸಾವಿ, ಅರುಣ ಕಾಮರೇಕರ ಮತ್ತಿತರರು ಭಾಗವಹಿಸಿದ್ದರು.

ಭಟ್ಕಳದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ ಮತ್ತಿತರರು ಇದ್ದರು. ಹೊನ್ನಾವರ, ಅಂಕೋಲಾ, ಕುಮಟಾ, ದಾಂಡೇಲಿ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.