26ರಿಂದ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ

| Published : Jan 17 2024, 01:47 AM IST

ಸಾರಾಂಶ

ಬಾಗಲಕೋಟೆ: ಸಂವಿಧಾನ ಜಾರಿಗೆ ಬಂದು 75ನೇ ವರ್ಷಾಚರಣೆ ಅಂಗವಾಗಿ ಜ.26ರಿಂದ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಮಂಗಳವಾರ ಜರುಗಿದ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಸಂವಿಧಾನದ ಮಹತ್ವ ಹಾಗೂ ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಉದ್ದೇಶದಿಂದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳನ್ನೊಳಗೊಂಡ ಸ್ತಬ್ಧ ಚಿತ್ರಗಳೊಂದಿಗೆ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂವಿಧಾನ ಜಾರಿಗೆ ಬಂದು 75ನೇ ವರ್ಷಾಚರಣೆ ಅಂಗವಾಗಿ ಜ.26ರಿಂದ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಮಂಗಳವಾರ ಜರುಗಿದ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಸಂವಿಧಾನದ ಮಹತ್ವ ಹಾಗೂ ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಉದ್ದೇಶದಿಂದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳನ್ನೊಳಗೊಂಡ ಸ್ತಬ್ಧ ಚಿತ್ರಗಳೊಂದಿಗೆ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ಹೇಳಿದರು.

ಜ.26ರಂದು ಜರಗುವ ಸ್ತಬ್ಧಚಿತ್ರದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಮೆರವಣಿಗೆಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಸಮಿತಿ ಸ್ತಬ್ಧಚಿತ್ರ ಮೆರವಣಿಗೆ ಮಾರ್ಗ ಅಂತಿಮಗೊಳಿಸಲಿದೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾರತದ ಸಂವಿಧಾನ ಪೀಠಿಕೆಯ ಮಾಹಿತಿಯುಳ್ಳ ಕರಪತ್ರಗಳನ್ನು ಮೆರವಣಿಗೆಯ ಉದ್ದಕ್ಕೂ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮೆರವಣಿಗೆಯ ರಚನೆ ಮತ್ತು ಸಂಯೋಜನೆ, ಮಾರ್ಗ, ತಂಗುವಿಕೆ, ವಸತಿ, ವಿಶ್ರಾಂತಿ, ಸುರಕ್ಷತೆ ಇತ್ಯಾದಿಗಳನ್ನು ಜಿಲ್ಲಾ ಸಮಿತಿ ನೋಡಿಕೊಳ್ಳಲಿದೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್‌ ಹಾಗೂ ನಾರಾಯಣಗುರು ಒಳಗೊಂಡ ಸ್ತಬ್ಧಚಿತ್ರ ನಿರ್ಮಿಸಲು ಕ್ರಮಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಮೆರವಣಿಗೆ ಗ್ರಾಮಗಳ ಮೂಲಕ ಹಾದು ಹೋಗುವಾಗ ತಾಲೂಕಿನ ಗಡಿಯಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸ್ವಾಗತಿಸಲು ವ್ಯವಸ್ಥೆ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಆಗಮಿಸಿದಾಗ ಸ್ಥಳೀಯ ಕಲಾತಂಡಗಳ ಮೂಲಕ ಸ್ವಾಗತಿಸುವುದರ ಜೊತೆಗೆ ಎಲ್ಲ ರೀತಿಯ ಬೆಂಬಲ ನೀಡುವ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಎನ್ ಜಿಒ ಸಂಘಟನೆಗಳು ಪಾಲ್ಗೊಳ್ಳುವಂತೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯಿಂದ ಸ್ತಬ್ಧಚಿತ್ರ ಆಯ್ಕೆ ಮಾಡಬೇಕು. ಹೆಚ್ಚಿನ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣ ಬಳಸಿಕೊಳ್ಳಲು ತಿಳಿಸಿದ ಅವರು, ತಾಲೂಕು, ನಗರ ಹಾಗೂ ಗ್ರಾಪಂ ಮಟ್ಟದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೃತ್ಯರೂಪಕ, ಸಂವಿಧಾನ ಮಹತ್ವ ಸಾರುವ ನಾಟಕ ಪ್ರದರ್ಶನಕ್ಕೆ ಮಕ್ಕಳನ್ನು ತಯಾರು ಮಾಡಲು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಶಶೀಧರ ಕುರೇರ, ಜಿಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ನಂದಾ ಹಣಮರಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಇತರರು ಉಪಸ್ಥಿತರಿದ್ದರು.

---

ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ

ಜನವರಿ 26ರಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಅಂಗವಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳ ಚಿಂತನೆ ಹಾಗೂ ಸಂವಿಧಾನ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಪ್ರೌಢ, ಪದವಿಪೂರ್ವ, ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪ್ರತಿ ತಾಲೂಕಿಗೆ 3 ಉತ್ತಮ ಪ್ರಬಂಧಗಳನ್ನು ಆಯ್ಕೆ ಮಾಡಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯಾ ತಾಲೂಕು ಮಟ್ಟದಲ್ಲಿಯೇ ಪ್ರಶಸ್ತಿ ನೀಡಲಾಗುತ್ತದೆ. ಮಾಹಿತಿಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.