ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರ
ವಿಶ್ವ ಹಿಂದೂ ಪರಿಷತ್‌ಗೆ ಈ ಕೃಷ್ಣ ಜನ್ಮಾಷ್ಟಮಿಗೆ 60 ವರ್ಷ ತುಂಬುವ ಹಿನ್ನೆಲೆಯಲ್ಲಿ ದೇಶಾದ್ಯಂತ ಆ.25ರಿಂದ ಸೆಪ್ಟೆಂಬರ್ 1ರವರೆಗೆ ಪ್ರಖಂಡ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ, ದ.ಕ. ಜಿಲ್ಲೆಯಲ್ಲೂ ಸಮ್ಮೇಳನಗಳು ನಡೆಯಲಿವೆ ಎಂದು ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೃಷ್ಣ ಜನ್ಮಾಷ್ಟಮಿಯಂದು ಪ್ರಾರಂಭಗೊಂಡ ಈ ಷಷ್ಠಿಪೂರ್ತಿ ಕಾರ್ಯಕ್ರಮವು ಪ್ರಖಂಡ ಸಮ್ಮೇಳನಗಳ ಮೂಲಕ ಸಮಾರೋಪಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಷಷ್ಠಿಪೂರ್ತಿ ಸಮಾರೋಪದ ಪ್ರಯುಕ್ತ ಬೃಹತ್ ಹಿಂದೂ ಸಮಾವೇಶಗಳು, ಸಮ್ಮೇಳನಗಳು, ಶೋಭಾಯಾತ್ರೆ ಮೆರವಣಿಗೆ ಬೇರೆ ಬೇರೆ ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ಮಂಗಳೂರು ನಗರದ ನಾಗುರಿ ಪ್ರಖಂಡ, ಬೋಳಾರ ಪ್ರಖಂಡ, ಮಣ್ಣಗುಡ್ಡೆ ಪ್ರಖಂಡ, ಕಾವೂರು ಪ್ರಖಂಡ, ಕೊಡಿಯಾಲಬೈಲ್ ಪ್ರಖಂಡ, ಉಳ್ಳಾಲ ತಾಲೂಕಿನ ಉಳ್ಳಾಲ ನಗರ ಮತ್ತು ಗ್ರಾಮಾಂತರ ಪ್ರಖಂಡ, ಗುರುಪುರ ಪ್ರಖಂಡ, ಮೂಡುಬಿದಿರೆ ಪ್ರಖಂಡ, ಮೂಲ್ಕಿ ಪ್ರಖಂಡ, ಬಂಟ್ವಾಳ, ವಿಟ್ಲ, ಪುತ್ತೂರು ನಗರ ಮತ್ತು ಗ್ರಾಮಾಂತರ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಕಲ್ಲಡ್ಕ, ಕಡಬ, ಸುಳ್ಯ ಪ್ರಖಂಡಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಾಧು ಸಂತರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರು, ಜಾತಿ, ಮತ, ಪಂಥಗಳ ಪ್ರಮುಖರು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹಿಂದೂ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಇದ್ದರು.----ಕಾರ್ಕಳ ಅತ್ಯಾಚಾರದಲ್ಲಿ ಪ್ರಕರಣದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಶರಣ್‌ಕನ್ನಡಪ್ರಭ ವಾರ್ತೆ ಮಂಗಳೂರುಕಾರ್ಕಳದಲ್ಲಿ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಪ್ರಥಮ ಆರೋಪಿ ಅಲ್ತಾಫ್‌ಗೆ ಮಾದಕ ವಸ್ತು ಪೂರೈಕೆ ಮಾಡಿದ ಆರೋಪದಲ್ಲಿ ಹಿಂದೂ ಕಾರ್ಯಕರ್ತ ಅಭಯ್ ಬಂಧನದ ಕುರಿತು ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಸಮಾಜ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃತ್ಯ ಯಾರೇ ಎಸಗಿರಲಿ, ಆತ ಅಭಯ್ ಅಥವಾ ಅಹಮ್ಮದ್ ಆಗಿರಲಿ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿರುದ್ಧದ ಯಾವುದೇ ಹೋರಾಟಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತೇವೆ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡೋದು ವಿಶ್ವ ಹಿಂದೂ ಪರಿಷತ್- ಬಜರಂಗದಳದ ಉದ್ದೇಶವೂ ಆಗಿದೆ. ಕಾರ್ಕಳ ಅತ್ಯಾಚಾರ ಪ್ರಕರಣದಲ್ಲಿ ಡ್ರಗ್ಸ್ ಸರಬರಾಜು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆದರೆ ಇದನ್ನೇ ಮುಂದಿಟ್ಟು ಅತ್ಯಾಚಾರ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಬಾರದು. ಒಂದು ವೇಳೆ ಪ್ರಕರಣ ತಿರುಚುವ ಪ್ರಯತ್ನ ಮಾಡಿದರೆ ಸಂಘಟನೆ ಸುಮ್ಮನಿರಲ್ಲ ಎಂದರು.ಅತ್ಯಾಚಾರ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕು. ರಾಷ್ಟ್ರ ದ್ರೋಹ, ಸಮಾಜ ಬಾಹಿರ, ಸಮಾಜಘಾತುಕ ಕೃತ್ಯ ಎಸಗಿದವರಿಗೆ ನಮ್ಮ ಸಂಘಟನೆಯಲ್ಲಿ ಜಾಗ ಇಲ್ಲ. ಸಂಘಟನೆಯಲ್ಲಿ ಅಂಥವರಿದ್ದರೆ ಹೊರಹಾಕುವ ಕೆಲಸ ನಡೆಯಲಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶರಣ್ ಪಂಪ್‌ವೆಲ್, ''''''''ಬಾಂಗ್ಲಾ ದೇಶದಲ್ಲಿ ನಡೆದ ದಂಗೆಯಂತೆಯೇ ಇಲ್ಲೂ ನಡೆಯಲಿದೆ'''''''' ಎಂದು ಐವನ್ ಹೇಳಿಕೆ ನೀಡಿದ್ದಾರೆ. ಆದರೂ ಪೊಲೀಸ್ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಒಂದು ಕಾನೂನು, ಇತರರಿಗೆ ಇನ್ನೊಂದು ಕಾನೂನು, ಐವನ್ ಡಿಸೋಜ ಅವರಿಗೆ ಮತ್ತೊಂದು ಕಾನೂನು ಇದೆಯಾ? ಪೊಲೀಸ್ ಇಲಾಖೆ ಐವನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.