ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆ: ಮಲ್ಲಿಕಾರ್ಜುನ ಬಳ್ಳಾರಿ

| Published : Feb 26 2024, 01:32 AM IST

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆ: ಮಲ್ಲಿಕಾರ್ಜುನ ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.27ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರೈತರ ಬೆಳೆಗೆ ವೈಜ್ಙಾನಿಕ ಬೆಲೆ ನಿಗದಿಪಡಿಸುವ ಎಂಎಸ್‌ಪಿಗೆ (ಕನಿಷ್ಠ ಬೆಂಬಲ ಬೆಲೆ) ಕಾನೂನಿನ ಮಾನ್ಯತೆ ನೀಡುವುದೂ ಸೇರಿದಂತೆ ಬರ ಪರಿಹಾರ, ಪ್ರತ್ಯೇಕ ಡಿಸಿಸಿ ಬ್ಯಾಂಕ್, ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಇತರ ಬೇಡಿಕೆ ಮುಂದಿಟ್ಟುಕೊಂಡು ಫೆ.27ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಪಟ್ಟಣದ ವಿ.ಎಸ್.ಎಸ್. ಬ್ಯಾಂಕ್ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಷ್ಟಪಟ್ಟು ಬೆಳೆದಂತಹ ಬೆಳೆಗೆ ಸೂಕ್ತ ಬೆಲೆಸಿಗದೆ ರಸ್ತೆ ಮದ್ಯದಲ್ಲಿ ಬೆಳೆಗಳನ್ನು ನೆಲಕ್ಕೆ ಸುರಿದು ರೈತರು ಕಣ್ಣೀರಿಡುತ್ತಿದ್ದಾರೆ. ಮಾಡಿದ ವೆಚ್ಚಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಲ್ಲಿ ಅಂತಹ ರೈತರ ನೆರವಿಗೆ ಬರುವಂತಹ ಎಂಎಸ್‌ಪಿಯನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸುವಂತೆ ದೆಹಲಿ ಹೊರಭಾಗದಲ್ಲಿ ಸುಮಾರು ಇನ್ನರಕ್ಕೂ ಹೆಚ್ಚು ರೈತಪರ ಸಂಘಟನೆಗಳು ಹೋರಾಟಕ್ಕಿಳಿದಿದ್ದು ರೈತ ಸಂಘವು ಕೂಡ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.

ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಬರ ಪರಿಹಾರ ನೀಡುವಂತೆ ರೈತರ ಆಗ್ರಹವಿದೆ. ಆದರೆ ಕೇವಲ ಪ್ರತಿಖಾತೆಗೆ ₹2 ಸಾವಿರ ಹಾಕಿ ಕೈತೊಳೆದುಕೊಂಡ ರಾಜ್ಯ ಸರ್ಕಾರ ಇನ್ನುಳಿದ ಹಣವನ್ನು ಹಾಕಿಲ್ಲ. ಇನ್ನೂ ಹಾಕಿದ್ದ ಹಣವನ್ನು ಪಡೆದುಕೊಳ್ಳದೇ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮರಳಿಸಿದ್ದೇವೆ. ಹೀಗಿದ್ದರೂ ಸಹ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ ಎಂದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಬೆಳೆಸಾಲ ತುಂಬಿದಲ್ಲಿ ಬಡ್ಡಿಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಫೆ.29 ರಂದು ಅಂತಿಮ ದಿನಾಂಕ ಘೋಷಿಸಿದ್ದು ಯಾವುದೇ ಕಾರಣಕ್ಕೂ ಹಣ ಮರುಪಾವತಿ ಸಾಧ್ಯವಿಲ್ಲ. ಸದರಿ ಗಡುವು ಸೆ.30 ರವರೆಗೆ ವಿಸ್ತಿರಿಸಿದಲ್ಲಿ ಮುಂದಿನ ವರ್ಷದ ಬೆಳೆಯನ್ನಾದರೂ ಬೆಳೆದು ಸಾಲದ ಕಂತನ್ನು ತುಂಬಲು ಸಾಧ್ಯವಾಗಲಿದ್ದು ಕೂಡಲೇ ಗಡುವು ವಿಸ್ತರಿಸುವಂತೆ ಆಗ್ರಹಿಸಿದರು.

ಈ ವೇಳೆ ಚಿಕ್ಕಪ್ಪ ಛತ್ರದ, ಮಂಜುನಾಥ ತೋಟದ, ಪರಮೇಶ್ವರ ನಾಯಕ್, ಕೆ.ವಿ. ದೊಡ್ಡಗೌಡ್ರ, ಜಾನ್ ಪುನೀತ್, ಕಿರಣ ಗಡಿಗೋಳ, ಬಾಬಣ್ಣ ಹೂಲಿಹಳ್ಳಿ ಸೇರಿದಂತೆ ಇತರರಿದ್ದರು.