ಜಿಲ್ಲಾದ್ಯಂತ ವೈಕುಂಠ ಏಕಾದಶಿ, ವಿಶೇಷ ಪೂಜೆ

| Published : Dec 24 2023, 01:45 AM IST

ಜಿಲ್ಲಾದ್ಯಂತ ವೈಕುಂಠ ಏಕಾದಶಿ, ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮ ಪ್ರಧಾನ ರಾಷ್ಟ್ರ ಭಾರತದಲ್ಲಿ ನಂಬಿಕೆ, ಆಚರಣೆಗಳೇ ವಿಭಿನ್ನ. ಅವುಗಳಲ್ಲೊಂದು ವೈಕುಂಠ ಏಕಾದಶಿ. 33 ದೇವತೆಗಳು ಭೂಮಿಗೆ ಬಂದು ಭಕ್ತರ ಹರಸುವ ವಿಶೇಷ ದಿನ ಎಂಬ ಕಾರಣಕ್ಕೆ ಶಿವಮೊಗ್ಗ ಜಿಲ್ಲಾದ್ಯಂತ ವೈಕುಂಠ ಏಕಾದಶಿ ಸಂಭ್ರಮಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವೈಕುಂಠ ಏಕಾದಶಿ ನಿಮಿತ್ತ ಶನಿವಾರ ನಗರ ಸೇರಿದಂತೆ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನಗರದ ನವುಲೆ ಬೆಟ್ಟದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆ ಬೆಳಗ್ಗಿನಿಂದ ಭಕ್ತ ರ ಸಮೂಹ ಪರಮಪದ ವೈಕುಂಠನ ದರ್ಶನ ಪಡೆಯಿತು. ವೆಂಕಟರಮಣ ದೇವಸ್ಥಾನದ ಬಳಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಾಲಯದ ಮಹಾದ್ವಾರದ ಬಳಿ ತೊಟ್ಟಿಲಲ್ಲಿ ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತರು ತೊಟ್ಟಿಲಲ್ಲಿ ಇರುವ ಮೂರ್ತಿಗೆ ನಮಸ್ಕರಿಸಿ, ದೇಗುಲ ಪ್ರವೇಶ ಮಾಡಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೇಷ್ಠವಾದ ಧರ್ನುಮಾಸದಲ್ಲಿ ಇಂದು 33 ಕೋಟಿ ದೇವತೆಗಳು ಭೂಲೋಕದಲ್ಲಿ ದರ್ಶನ ನೀಡುವವರೆಂಬ ಪ್ರತೀತಿ ಹಿನ್ನಲೆಯಲ್ಲಿ ಭಕ್ತಾಧಿಗಳು ದೇವರ ದರ್ಶನ ಪಡೆದು ಪುನಿತರಾದರು.

ಬಹುತೇಕ ದೇಗುಲಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಏರ್ಪಡಿಸಲಾಗಿತ್ತು. ಭಗವಾನ್ ಶ್ರೀ ಮಹಾವಿಷ್ಣು ಮಾರ್ಗಶಿರ ಮಾಸದ ಏಕದಶಿಯಾದ ಇಂದು ಭೂಲೋಕಕ್ಕೆ ಇಳಿದು ಬಂದು ಭಕ್ತಾಧಿಗಳ ಇಷ್ಟಾರ್ಥ ಸಿದ್ಧಿ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ, ಜಿ.ಎಸ್.ಕೆ.ಎಂ. ರಸ್ತೆಯ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವಮಂದಿರ, ವೆಂಕಟೇಶ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಅಂಡಾಳ್‌ಗೋಷ್ಟಿ ಸಮಿತಿಯ ಅಶ್ವಥ್‌ನಗರದ ದೇವಗಿರಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ನವುಲೆಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಜಯನಗರ ಶ್ರೀ ರಾಮಮಂದಿರದಲ್ಲಿ ವಿಶೇಷ ಅಲಂಕಾರ ಮಾಡಲಾಯಿತು. ಎಲ್ಲ ದೇವಾಲಯಗಳಲ್ಲೂ ಭಕ್ತರಿಗೆ ತೀರ್ಥ-ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಪ್ತದ್ವಾರಗಳ ವೈಕುಂಠ ದರ್ಶನ ವಿಶೇಷ ಅಲಂಕಾರ ಮಾಡಲಾಗಿತ್ತು.

- - -ಭದ್ರಾವತಿ ಭಕ್ತರ ಕಣ್ಮನ ಸೆಳೆದ ವೈಕುಂಠನಾಥ ದರ್ಶನಭದ್ರಾವತಿ: ನಗರದ ಹಳೇ ನಗರದ ಪುರಾಣ ಪ್ರಸಿದ್ಧ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ವೈಕುಂಠ ಏಕಾದಶಿ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ 4.30ರಿಂದಲೇ ವೈಕುಂಠನಾಥನ ದರ್ಶನ ಆರಂಭಗೊಂಡಿದ್ದು, ಈ ಬಾರಿ ಸಹ ಸ್ವಾಮಿ ದರ್ಶನ ಭಕ್ತರ ಕಣ್ಮನ ಸೆಳೆಯುತ್ತಿದೆ. ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವ ಮೂಲಕ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಉಪವಿಭಾಗಾಧಿಕಾರಿ ಜಿ.ಎಚ್. ಸತ್ಯನಾರಾಯಣ, ತಹಸೀಲ್ದಾರ್ ಕೆ.ಆರ್. ನಾಗರಾಜು, ಡಿ.ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ಅನುರಾಧ ಪಟೇಲ್, ಕೂಡ್ಲಿಗೆರೆ ಎಸ್.ಹಾಲೇಶ್, ದೇವಾಲಯ ಸಹಾಯಕ ಅರ್ಚಕ ಶ್ರೀನಿವಾಸ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಜಿ. ಮಾರುತಿ, ಪದಾಧಿಕಾರಿಗಳಾದ ಆಶಾ ಪುಟ್ಟಸ್ವಾಮಿ, ಗಿರಿನಾಯ್ಡು, ವಿಶ್ವೇಶ್ವರ ಗಾಯಕ್ವಾಡ್, ಉಪ ತಹಸೀಲ್ದಾರ್ ಮಂಜಾನಾಯ್ಕ, ಎ.ಟಿ.ಬಸವರಾಜು ಇನ್ನಿತರರು ಉಪಸ್ಥಿತರಿದ್ದರು. - - -

-23ಎಸ್‌ಎಂಜಿಕೆಪಿ05: ಶಿವಮೊಗ್ಗ ಕೋಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಅಲಂಕಾರ ಮಾಡಲಾಯಿತು. -23ಎಸ್‌ಎಂಜಿಕೆಪಿ06: ಶಿವಮೊಗ್ಗ ಕೋಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಭಕ್ತರು ದೇವರ ದರ್ಶನ ಪಡೆದರು.

-ಡಿ23ಬಿಡಿವಿಟಿ: ಭದ್ರಾವತಿ ಹಳೇ ನಗರದ ಪುರಾಣ ಪ್ರಸಿದ್ಧ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ವೈಕುಂಠನಾಥ ದರ್ಶನ ಭಕ್ತರ ಕಣ್ಮನ ಸೆಳೆಯಿತು.