ಸಮಸ್ಯೆಯ ಆಗರ ನಮ್ಮ ಮಹಾನಗರ !

| Published : Aug 08 2024, 01:33 AM IST

ಸಾರಾಂಶ

ಎರಡೂ ರಸ್ತೆಯಲ್ಲಿ ಹತ್ತಾರು ಕಡೆ ಬಾವಿಗಳಂತೆ ಮ್ಯಾನ್ ಹೋಲ್ ಕುಸಿಯತೊಡಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿವೆ. ಮೈಸೂರಿನ ವರ್ತುಲ ರಸ್ತೆಯು ಕುಸಿದು ಬಾವಿ ಪ್ರತ್ಯಕ್ಷವಾಗಿದೆ.

ಈಗ ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆ ಮತ್ತು ನೃಪತುಂಗ ರಸ್ತೆಯು ಮೆಲ್ಲಗೆ ಕುಸಿಯಲಾರಂಭಿಸಿದೆ.

ಈ ಎರಡೂ ರಸ್ತೆಯಲ್ಲಿ ಹತ್ತಾರು ಕಡೆ ಬಾವಿಗಳಂತೆ ಮ್ಯಾನ್ ಹೋಲ್ ಕುಸಿಯತೊಡಗಿವೆ. ಆದಿಚುಂಚನಗಿರಿ ರಸ್ತೆಯ ಆರ್.ಎಂ.ಪಿ. ವಸತಿಗೃಹದ ಎದುರು ಉದ್ದಕ್ಕೂ ಒಂದು ಭಾಗದ ರಸ್ತೆ ಅಪಾಯಕಾರಿಯಾಗಿ ಬಿರುಕುಬಿಟ್ಟು ಕುಸಿಯತೊಡಗಿದೆ.

ಅದೇ ರೀತಿ ನೃಪತುಂಗ ರಸ್ತೆಯ ಮೂಲಕ ಬಸ್ ಡಿಪೋಗೆ ಹೋಗುವ ಮಾರ್ಗದುದ್ದಕ್ಕೂರಸ್ತೆಯೇ ಮಾಯವಾಗಿ ಹಳ್ಳಕೊಳ್ಳ ರಾರಾಜಿಸುತ್ತಿವೆ. ಹಲವೆಡೆ ಮ್ಯಾನ್ ಹೋಲ್ ಬಳಿ ಬಾವಿಗಳೇ ಗೋಚರಿಸುವಂತಿವೆ.

ಆದಿಚುಂಚನಗಿರಿ ರಸ್ತೆಯ ಒಂದು ಭಾಗದಲ್ಲಿ ಸಂಚರಿಸುವ ಆಟೋ, ಕಾರು ಬಸ್ಸುಗಳು ಕಾಂಗರೂಗಳಂತೆ ಕುಪ್ಪಳಿಸಿತ್ತಾ ಸಂಚರಿಸುತ್ತಿವೆ.

ಆದಿಚುಂಚನಗಿರಿ ರಸ್ತೆ ಹಾಗೂ ನೃಪತುಂಗ ರಸ್ತೆಯ ಮೇಲೆಯೇ ಯುಜಿಡಿ ನಿರ್ಮಿಸುವುದಕ್ಕಾಗಿ 15 ರಿಂದ 20 ಅಡಿ ಆಳದ ಗುಂಡಿ ತೋಡಿ ಅದನ್ನು ಸರಿಯಾಗಿ ಮುಚ್ಚದೆ ರಸ್ತೆ ನಿರ್ಮಾಣ ಮಾಡಿರುವುದರಿಂದ ಈ ಎರಡೂ ರಸ್ತೆಗಳು ಕುಸಿಯತೊಡಗಿವೆ.ಬಹುತೇಕ ಮ್ಯಾನ್ ಹೋಲ್ ಗಳು ಭೂಕಂಪನಕ್ಕೊಳಗಾದಂತೆ ಭೂಗರ್ಭ ಸೇರಲು ತವಕಿಸುತ್ತವೆ.

ಸ್ವಲ್ಪ ಎಚ್ಚರ ತಪ್ಪಿದರೂ ಶಾಲಾ ವಾಹನಗಳು, ಆಟೋ, ಕಾರು ಹಾಗೂ ದ್ವಿಚಕ್ರವಾಹನಗಳು ಬುಡಮೇಲಾಗಿ ಪಲ್ಟಿ ಹೊಡೆದು ಬೀಳಲಿವೆ.

ಮುಖ್ಯಮಂತ್ರಿಗಳ ತವರೂರು, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ಅರಮನೆ ನಗರಿ, ನಂ. 1 ಸ್ವಚ್ಛ ನಗರಿ ಎಂದು ಬೀಗುವ ಮೈಸೂರಿನ ಕುವೆಂಪು ನಗರದ ಈ ರಸ್ತೆಗಳು ಪಾಲಿಕೆಯನ್ನು ಅಣಕಿಸುತ್ತಿವೆ.ಅಪಾಯ ತಂದಿಡಲು ಬಾಯಿತೆರದು ಕಾಯುತ್ತವೆ!

ಮೈಸೂರಿಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಆದಿಚುಂಚನಗಿರಿ ರಸ್ತೆ ಹಾಗೂ ನೃಪತುಂಗ ರಸ್ತೆಯಲ್ಲಿ ಸಂಚರಿಸಿದರೆ ನಿಮಗೆ ಸ್ವಲ್ಪನೂ ಮಾನ ಮರ್ಯಾದೆ ಇಲ್ವಾ? " ಎಂದು ಪಾಲಿಕೆಗೆ ಛೀಮಾರಿ ಹಾಕುವುದು ಖಚಿತ!

ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಈ ಎರಡೂ ರಸ್ತೆಗಳು ಕುಸಿಯುವುದನ್ನು ತಡೆಗಟ್ಟಿ ಅನಾಹುತವನ್ನು ತಪ್ಪಿಸಲಿ.

--------

ಈ ಭಾಗದಲ್ಲಿ ಸಂಚರಿಸುವ ಪಾಲಿಕೆ ಸದಸ್ಯರು ಹಾಗೂ ಏರಿಯಾ ಇಂಜಿನಿಯರುಗಳು ಕಣ್ತೆರೆಯದಿದ್ದರೆ ಅವರಿಗೇ ಅಪಾಯವಾಗಬಹುದು.

-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.