ಮಾದಕ ದ್ರವ್ಯ ಸೇವಿಸಿ ಮತ್ತು ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಆರೋಪಿಗೆ ದಂಡದ ಜತೆಗೆ ಸಾರ್ವಜನಿಕರಿಗೆ ಉಪಯುಕ್ತವಾದ ಸಮುದಾಯ ಸೇವೆ ಶಿಕ್ಷೆ ವಿಧಿಸುವ ಮೂಲಕ ವಿರಾಜಪೇಟೆಯ ನ್ಯಾಯಾಲಯ ಗಮನ ಸೆಳೆದಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಮಾದಕ ದ್ರವ್ಯ ಸೇವಿಸಿ ಮತ್ತು ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಆರೋಪಿಗೆ ದಂಡದ ಜತೆಗೆ ಸಾರ್ವಜನಿಕರಿಗೆ ಉಪಯುಕ್ತವಾದ ಸಮುದಾಯ ಸೇವೆ ಶಿಕ್ಷೆ ವಿಧಿಸುವ ಮೂಲಕ ವಿರಾಜಪೇಟೆಯ ನ್ಯಾಯಾಲಯ ಗಮನ ಸೆಳೆದಿದೆ.ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎ. ಅಸೀಮ್ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ವಿರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದಿತ್ತು. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 27(b) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 355ರ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು.
ನ್ಯಾಯಾಲಯವು ಎನ್ಡಿಪಿಎಸ್ ಕಾಯ್ದೆಯಡಿ ₹5 ಸಾವಿರ ದಂಡ ವಿಧಿಸುವುದರ ಜತೆಗೆ, ನ. 15ರಂದು ಸಿದ್ದಾಪುರ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಿತು. ಈ ಸೇವೆಯನ್ನು ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಅಥವಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ವಹಿಸಬೇಕು ಹಾಗೂ ಸೇವೆ ಸಮರ್ಪಕವಾಗಿ ನಡೆದಿರುವ ಕುರಿತು ವರದಿ ಸಲ್ಲಿಸಬೇಕು ಎಂದು ಠಾಣೆಯ ಪಿಎಸ್ಐಗೆ ಸೂಚಿಸಿತ್ತು.ನ್ಯಾಯಾಲಯದ ಆದೇಶದಂತೆ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆರೋಪಿ ಸಿದ್ದಾಪುರ ಪಟ್ಟಣದ ಮುಖ್ಯ ವೃತ್ತದಲ್ಲಿ ವಾಹನ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸುವ ಮೂಲಕ ಸಮುದಾಯ ಸೇವೆ ಸಲ್ಲಿಸಿದನು.
ತಪ್ಪಿತಸ್ಥರಿಗೆ ದಂಡ ವಿಧಿಸುವುದರ ಜತೆಗೆ, ಸಮಾಜಕ್ಕೆ ಉಪಯುಕ್ತವಾದ ಸೇವೆಯನ್ನೂ ಶಿಕ್ಷೆಯ ಭಾಗವಾಗಿಸಿರುವ ನ್ಯಾಯಾಲಯದ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.