ನರಗುಂದದಲ್ಲಿ ಉಪಯೋಗಕ್ಕೆ ಬಾರದ ಫುಟ್‌ಪಾತ್‌

| Published : Apr 02 2024, 01:00 AM IST

ಸಾರಾಂಶ

ಪಾದಚಾರಿ ಮಾರ್ಗ ಬಿಟ್ಟು ರಸ್ತೆಗಿಳಿದ ಕೆಲವರು ಅಪಘಾತಕ್ಕೀಡಾದ ಉದಾಹರಣೆ ಇದೆ. ಹೀಗಾಗಿ ಪಾದಚಾರಿ ಮಾರ್ಗ ತೆರವುಗೊಳಿಸಿ ಜನರಿಗೆ ಸುಗಮವಾಗಿ ನಡೆದು ಹೋಗಲು ಅನುವು ಕಲ್ಪಿಸಬೇಕು. ಅತಿಕ್ರಮಣ ತೆರವುಗೊಳಿಸಬೇಕು

ಎಸ್.ಜಿ. ತೆಗ್ಗಿನಮನಿ ನರಗುಂದ

ಪಟ್ಟಣ ಪ್ರದೇಶದಲ್ಲಿ ಹಲವೆಡೆ ಪಾದಚಾರಿ ಮಾರ್ಗ (ಫುಟ್‌ಪಾತ್‌) ನಿರ್ಮಿಸಲಾಗಿದ್ದರೂ ಅದು ಜನರ ಉಪಯೋಗಕ್ಕೆ ಬಾರದಂತಾಗಿದೆ.

ಇದರಿಂದ ಸರ್ಕಾರದ ಅನುದಾನ ವ್ಯರ್ಥವಾಗಿರುವುದಷ್ಟೇ ಅಲ್ಲ, ಸುಗಮ ಸಂಚಾರಕ್ಕೆ, ಸಾರ್ವಜನಿಕರ ಸುರಕ್ಷತೆಗೆ ಸರ್ಕಾರದ ಕ್ರಮವೂ ವಿಫಲವಾಗುತ್ತಿರುವುದಕ್ಕೆ ಸಾಕ್ಷಿ. ಪಟ್ಟಣದಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಹೊರವಲಯದ ಕಲಕೇರಿ ಮಾರ್ಗದ ಹಿರೇಹಳ್ಳದಿಂದ ಕೊಣ್ಣೂರ ಮಾರ್ಗದ ವೀರನಗೌಡ್ರ ಪೆಟ್ರೋಲ್ ಪಂಪ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಡಿವೈಡರ್‌ ನಿರ್ಮಿಸಲಾಗಿದೆ. ಈ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಪೂರ್ಣವಾಗಿಲ್ಲ.

ಪಟ್ಟಣದ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಮಾರ್ಗದಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ಒಳಗೊಂಡ ಮಿನಿವಿಧಾನ ಸೌಧವಿದೆ. ಅಲ್ಲೇ ಪಕ್ಕದಲ್ಲಿ ಶಾಸಕರ ಜನಸಂಪರ್ಕ ಕಾರ್ಯಾಲಯ ಹಾಗೂ ಸ್ವಗೃಹ ಇದೆ. ಹತ್ತಿರದಲ್ಲೇ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಡಿಪ್ಲೊಮಾ ಕಾಲೇಜು ಇದೆ. ಹೋಟೆಲ್‌, ಡಾಬಾಗಳು ಸಾಕಷ್ಟಿವೆ. ನಿತ್ಯವೂ ನೂರಾರು ವಿದ್ಯಾರ್ಥಿಗಳು, ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ ಇಲ್ಲಿ ಫುಟ್‌ಪಾತ್‌ ಮೇಲೆ ನಡೆದು ಹೋಗಬೇಕಿದ್ದ ಜನರು ಫುಟ್‌ಪಾತ್‌ ಬಿಟ್ಟು ರಸ್ತೆಗೆ ಇಳಿಯುವುದು ಅನಿವಾರ್ಯವಾಗಿದೆ. ಕೆಲವೆಡೆ ಅರ್ಧಂಬರ್ಧ ಫುಟ್‌ಪಾತ್‌ ನಿರ್ಮಿಸಲಾಗಿದೆ. ಕೆಲವೆಡೆ ಫುಟ್‌ಪಾತ್‌ ಮೇಲೆ ಮುಳ್ಳುಕಂಟಿಗಳು ಬೆಳೆದಿವೆ. ಬಸ್ ನಿಲ್ದಾಣದ ಹತ್ತಿರದ ಪಾದಚಾರಿ ಮಾರ್ಗವನ್ನು ಅಂಗಡಿಕಾರರು ಅತಿಕ್ರಮಣ ಮಾಡಿದ್ದಲ್ಲದೇ ರಸ್ತೆಗೆ‌ ಕಸ ಚೆಲ್ಲುತ್ತಿದ್ದಾರೆ. ಕೆಲವರು ವಾಹನ ನಿಲುಗಡೆ ಮಾಡುತ್ತಾರೆ. ಹೀಗಾಗಿ ಕೆಲವೆಡೆ ಪಾದಚಾರಿ ಮಾರ್ಗವೇ ಕಣ್ಮರೆಯಾಗಿದೆ.

ಪಾದಚಾರಿ ಮಾರ್ಗ ಬಿಟ್ಟು ರಸ್ತೆಗಿಳಿದ ಕೆಲವರು ಅಪಘಾತಕ್ಕೀಡಾದ ಉದಾಹರಣೆ ಇದೆ. ಹೀಗಾಗಿ ಪಾದಚಾರಿ ಮಾರ್ಗ ತೆರವುಗೊಳಿಸಿ ಜನರಿಗೆ ಸುಗಮವಾಗಿ ನಡೆದು ಹೋಗಲು ಅನುವು ಕಲ್ಪಿಸಬೇಕು. ಅತಿಕ್ರಮಣ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಫುಟ್‌ಪಾತ್‌ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದರೆ, ಪೋಲಿಸ್‌ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಮಿತ್‌ ತಾರದಾಳೆ ಹೇಳಿದರು.

ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಮತ್ತು ಹೆದ್ದಾರಿ ಬದಿಯಲ್ಲಿರುವ ಫುಟ್‌ಪಾತ್‌ಗಳ ಅತಿಕ್ರಮಣದಿಂದ ಸಾರ್ವಜನಿಕರು ರಸ್ತೆಯಲ್ಲಿಯೇ ನಡೆದು ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದರಿಂದ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆಯವರು ಅತಿಕ್ರಮಣ ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ತಾಲೂಕಾಧ್ಯಕ್ಷ ನಬೀಸಾಬ್‌ ಕಿಲೇದಾರ ಹೇಳಿದರು.