ಸಾರಾಂಶ
ಸಾಗರ ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಶನಿವಾರ ಜೀವನ್ಮುಖಿ ಮತ್ತು ಚರಕ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅವ್ವ ಮಹಾಸಂತೆ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಸಾಗರ
ಪ್ರಸ್ತುತ ಅಧಿಕ ಇಳುವರಿ ಇತ್ಯಾದಿ ಕಾರಣಗಳಿಗಾಗಿ ಭೂಮಿಗೆ ವಿಷ ಉಣಿಸಲಾಗುತ್ತಿದೆ. ಇದರಿಂದಾಗಿ ಫಲವತ್ತಾದ ಭೂಮಿ ಬರಡಾಗುವ ಜೊತೆಗೆ ಮನುಕುಲದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಇಕ್ರಾ ಸಂಸ್ಥೆಯ ಗಾಯತ್ರಿ ಬಿ. ಅಭಿಪ್ರಾಯಪಟ್ಟರು.ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಶನಿವಾರ ಜೀವನ್ಮುಖಿ ಮತ್ತು ಚರಕ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅವ್ವ ಮಹಾಸಂತೆ -೨೦೨೪ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇನ್ನಾದರೂ ಭೂಮಿಗೆ ವಿಷ ಉಣಿಸುವುದನ್ನು ನಿಲ್ಲಿಸಿ, ನಮ್ಮ ಹಳೆಯ ಭತ್ತದ ತಳಿಗಳನ್ನು ಮತ್ತೆ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು ಎಂದು ಹೇಳಿದರು.
ಹಿಂದೆ ನಮ್ಮಲ್ಲಿ ಸಮೃದ್ಧವಾದ ಭೂಮಿ ಇತ್ತು. ಹೊಸ ಹೊಸ ತಳಿಯ ಭತ್ತಗಳು ಇದ್ದವು. ಈಗ ಕೃಷಿಯಲ್ಲಿ ವೈವಿಧ್ಯತೆ ದೂರವಾಗಿ ಕೃಷಿ ಅಧೋಗತಿಗೆ ಇಳಿದಿದೆ. ಇಂತಹ ಮಹಾಸಂತೆಗಳ ಮೂಲಕ ಕೃಷಿ ಉತ್ತೇಜನಕ್ಕೆ ಚಾಲನೆ ನೀಡಬೇಕು ಎಂದ ಅವರು, ಈ ಭಾಗದಲ್ಲಿ ಚರಕ ಸಂಸ್ಥೆಯ ಮೂಲಕ ಗ್ರಾಮೋದ್ಯೋಗವನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಕೆಲಸ ನಡೆಯುತ್ತಿದೆ. ಚರಕದ ಪ್ರಸನ್ನ ಗುರು ಸ್ಥಾನದಲ್ಲಿ ನಿಂತು ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೈಮಗ್ಗ ಜೊತೆಗೆ ಕಲೆಯನ್ನು ಜೀವಂತವಾಗಿರಿಸುವ ಕೆಲಸ ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇದನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಆಶಿಸಿದರು.ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಅವ್ವ ಮಹಾಸಂತೆ ಕಲ್ಪನೆ ವಿಶೇಷವಾಗಿದೆ. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಉತ್ಪಾದಿಸಿದ ಉತ್ಪನ್ನ ಗಳಿಗೆ ಮಾರುಕಟ್ಟೆ ಕಲ್ಪಿಸುವ ಜೊತೆಗೆ ಅವರಲ್ಲಿ ಆರ್ಥಿಕ ಚೈತನ್ಯ ತುಂಬಿ, ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರು ಇನ್ನಷ್ಟು ಕ್ರಿಯಾಶೀಲವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳ ಅಗತ್ಯ ಹೆಚ್ಚು ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ಜೇಡಿಕುಣಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸ್ನೇಹಸಾಗರ ಸ್ವಸಹಾಯ ಮಂಡಳಿಯ ಚೂಡಾಮಣಿ ರಾಮಚಂದ್ರ ಹಾಜರಿದ್ದರು. ಪದ್ಮಶ್ರೀ ಸ್ವಾಗತಿಸಿದರು. ಪ್ರತಿಭಾ ಎಂ.ವಿ. ಕಾರ್ಯಕ್ರಮ ನಿರ್ವಹಿಸಿದರು. ನಂತರ ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ ಹಾಗೂ ಜಾನಪದ ಕಲಾತಂಡದಿಂದ ಜಾನಪದ ಗೀತ ಗಾಯನ ಕಾರ್ಯಕ್ರಮ ನಡೆಯಿತು.