ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಭಾಷೆ, ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ವೈವಿಧ್ಯಮವಾಗಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಜತೆಗೆ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ್ ಕರೆನೀಡಿದರು.ಪಟ್ಟಣದ ರಂಗಮಂದಿರ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಮುಂದಾಗಬೇಕು. ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮಿಬಾಯಿ ಸೇರಿದಂತೆ ಅಸಂಖ್ಯಾತ ವೀರರ ತ್ಯಾಗ ಬಲಿದಾನವಿದೆ. ಅವರ ಹೋರಾಟದ ಫಲವಾಗಿ ದೇಶವಾಸಿಗಳು ಸುಭೀಕ್ಷವಾಗಿ ಬದುಕುತ್ತಿದ್ದಾರೆ. ಯುವ ಜನಾಂಗ ದೇಶದ ಅತಿ ದೊಡ್ಡ ಆಸ್ತಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ತಂತ್ರಜ್ಞಾನ, ಕಲೆ, ವಿಜ್ಞಾನ, ಕ್ರೀಡೆ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ಯುವಜನತೆ ಸಾಧನೆ ಮಾಡಬೇಕು. ಸರ್ಕಾರಗಳು ಸಹ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ಸದುಪಯೋಗ ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೯ ವರ್ಷಗಳು ಗತಿಸಿದರೂ ಸಹ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅನಕ್ಷರತೆ ಮತ್ತು ಪರಿಸರ ಸಮಸ್ಯೆಗಳು ಪ್ರಗತಿಗೆ ಅಡ್ಡಿಯಾಗಿದೆ. ಇವುಗಳನ್ನು ಸವಾಲಾಗಿ ಸ್ವೀಕರಿಸಿ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. ಕೇವಲ ಸರ್ಕಾರದ ಕೆಲಸವೆಂದು ಭಾವಿಸದೆ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದ ಅವರು, ಜಿಲ್ಲೆಯನ್ನು ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಮುಕ್ತ ಜಿಲ್ಲೆಯನ್ನಾಗಿಸಲು ಮಿಷನ್ ಸುರಕ್ಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದರು.
ನಂತರ ರಂಗಮಂದಿರದ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜನಿ ಪ್ರವೀಣ್ ಕುಮಾರ್, ಸದಸ್ಯರಾದ ಎಂ.ಡಿ.ಉಮೇಶ್, ಮಧುರಾಯ್ ಜಿ.ಶೇಟ್, ಪ್ರೇಮಾ, ವೀರೇಶ್ ಮೇಸ್ತ್ರಿ, ಅಫ್ರೀನಾ ಬಾನು, ಸುಲ್ತಾನ ಬೇಗಂ, ಅನ್ಸರ್, ನಾಮನಿರ್ದೇಶಿತ ಸದಸ್ಯ ಪರಶುರಾಮ ಸಣ್ಣಬೈಲ್, ಮುಖ್ಯಾಧಿಕಾರಿ ಎಚ್.ವಿ.ಚಂದನ್, ತಾಪಂ ಇಒ ಕೆ.ಜಿ ಶಶಿಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಬಿಇಒ ಆರ್.ಪುಷ್ಪಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.