ಸಾರಾಂಶ
ಆರಾಧನೆಯ ಪೂರ್ವಭಾವಿಯಾಗಿ ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀನರಸಿಂಹ ಸ್ವಾಮಿ, ಶ್ರೀಹೊಳೆ ಆಂಜನೇಯ ಸ್ವಾಮಿ ಮತ್ತು ಶ್ರೀವಿಶ್ವೇಶ್ವರಸ್ವಾಮಿ ಸನ್ನಿಧಿಗಳಲ್ಲಿ ಅಭಿಷೇಕ ಸೇವೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀರಾಘವೇಂದ್ರ ಗುರು ಸಾರ್ವಭೌಮರ 353ನೇ ವರ್ಷದ ಆರಾಧನಾ ಮಹೋತ್ಸವದ ಪ್ರಯುಕ್ತ ಶ್ರೀರಾಘವೇಂದ್ರ ಸ್ವಾಮಿಗಳ ದಿವ್ಯ ಮಹಾರಥೋತ್ಸವ ಪಟ್ಟಣದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಸೇವಾ ಟ್ರಸ್ಟ್‌ನಿಂದ ಮುಂಜಾನೆ ಸುಪ್ರಭಾತ, ದೇವತಾ ಪೂಜೆ, ಪಾರಾಯಣ ನಂತರ ಶ್ರೀಗಳ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ ನೆರವೇರಿಸಲಾಯಿತು.
ಆರಾಧನೆಯ ಪೂರ್ವಭಾವಿಯಾಗಿ ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀನರಸಿಂಹ ಸ್ವಾಮಿ, ಶ್ರೀಹೊಳೆ ಆಂಜನೇಯ ಸ್ವಾಮಿ ಮತ್ತು ಶ್ರೀವಿಶ್ವೇಶ್ವರಸ್ವಾಮಿ ಸನ್ನಿಧಿಗಳಲ್ಲಿ ಅಭಿಷೇಕ ಸೇವೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.ಬೆಳಗ್ಗೆ 10:30 ಸುಮಾರಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂದಿರದ ಆವರಣದಿಂದ ಕೋಟೆ ಬೀದಿ ಮಾರ್ಗದಲ್ಲಿ ರಥ ಸಂಚರಿಸಿತು. ಭಕ್ತಾದಿಗಳು ರಾಘವೇಂದ್ರಶ್ರೀಗಳ ನಾಮಸ್ಮರಣೆ ಯೊಂದಿಗೆ ರಥ ಎಳೆಯುವ ಮೂಲಕ ಧನ್ಯತಾಭಾವ ಮೆರೆದರು.
ಬಳಿಕ ರಾಘವೇಂದ್ರ ಮಠದಲ್ಲಿ ಮೂಲ ವಿಗ್ರಹಕ್ಕೆವಿಶೇಷ ಪುಷ್ಪಾಲಂಕಾರ, ಕನಕಾಭಿಷೇಕ, ಸಹಸ್ರನಾಮ ಅರ್ಚನೆ ಮಹಾಮಂಗಳಾರತಿ ತರುವಾಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಮಂದಿರದಲ್ಲಿ ಪಲ್ಲಕ್ಕಿ ಉತ್ಸವ ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.ಶ್ರೀರಾಘವೇಂದ್ರ ಗುರು ಸಾರ್ವಭೌಮರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ರಾಮಚಂದ್ರ ಪ್ರಸಾದ್, ಕಾರ್ಯದರ್ಶಿ ವೆಂಕಟೇಶ ಬುದ್ಯ, ಕಾರ್ಯಾಧ್ಯಕ್ಷ ವಿ.ಆರ್. ಗುಂಡೂರಾವ್, ಪದಾಧಿಕಾರಿಗಳಾದ ವೆಂಕಟೇಶ್ ಮೂರ್ತಿ, ಮೋಹನ, ಮಂಜುನಾಥ್ ಮತ್ತಿತರರು ಇದ್ದರು.