ಸತ್ಯದ ಜತೆ ದೈವಶಕ್ತಿ ಸದಾ ಇರುತ್ತದೆ: ರಂಭಾಪುರಿ ಶ್ರೀ

| Published : Oct 10 2025, 01:00 AM IST

ಸತ್ಯದ ಜತೆ ದೈವಶಕ್ತಿ ಸದಾ ಇರುತ್ತದೆ: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜೀವಾತ್ಮರಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ ಅಮೂಲ್ಯ. ಅರಿವುಳ್ಳ ಮಾನವ ಜನ್ಮ ಸಾರ್ಥಕಪಡಿಸಿಕೊಳ್ಳಲು ಶ್ರಮ ಮತ್ತು ಸಾಧನೆ ಅವಶ್ಯಕ.

ಲಕ್ಷ್ಮೇಶ್ವರ: ಸತ್ಯ ಮನುಷ್ಯ ಜೀವನವನ್ನು ಬದಲಿಸುತ್ತದೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸುಳ್ಳಿನ ಜತೆ ದುಷ್ಟಶಕ್ತಿ ಇದ್ದರೆ ಸತ್ಯದ ಜತೆ ದೈವ ಶಕ್ತಿ ಸದಾ ಇರುತ್ತದೆ ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ತಿಳಿಸಿದರು.ಗುರುವಾರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ೪೩ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜೀವಾತ್ಮರಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ ಅಮೂಲ್ಯ. ಅರಿವುಳ್ಳ ಮಾನವ ಜನ್ಮ ಸಾರ್ಥಕಪಡಿಸಿಕೊಳ್ಳಲು ಶ್ರಮ ಮತ್ತು ಸಾಧನೆ ಅವಶ್ಯಕ. ಒಳ್ಳೆಯ ಕಾರ್ಯ ಮಾಡುವಾಗ ಎಡರು ತೊಡರುಗಳು ಮಹಾತ್ಮರಿಗೂ ಬಿಟ್ಟಿಲ್ಲ. ಒಳ್ಳೆಯವರಿಗೆ ಇರುವಷ್ಟು ವೈರಿಗಳು ದುರ್ಜನರಿಗೆ ಇರುವುದಿಲ್ಲ. ದುರ್ಜನರಿಗೆ ಇರುವಷ್ಟು ಸ್ನೇಹಿತರು ಒಳ್ಳೆಯವರಿಗೆ ಇರುವುದಿಲ್ಲ ಎಂದರು.

ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗದೇ ನೋವು ನುಂಗಿ ನಲಿವನ್ನು ಹೊಂದಿ ಮುನ್ನಡೆಯುಬೇಕು. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿ ಸದಾ ಇರುತ್ತದೆ. ಬರುವ ಅಡ್ಡಿ ಆತಂಕಗಳನ್ನು ಗಮನಿಸದೇ ತೊಂದರೆ ತಾಪತ್ರಯಗಳಿಗೆ ಅಂಜದೇ ಅಳುಕದೇ ಲಿಂ. ರಂಭಾಪುರಿ ವೀರಗಂಗಾಧರ ಶ್ರೀಗಳು ಸತ್ಯ ಸಂಸ್ಕೃತಿ ಸಂವರ್ಧಿಸುವುದರಲ್ಲಿ ಶ್ರಮಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಭೂಲೋಕದ ಶಿವನಾಗಿ ಸಂಚರಿಸಿ ಜನಮನದಲ್ಲಿ ಅಧ್ಯಾತ್ಮದ ಅರಿವನ್ನು ಉಂಟು ಮಾಡಿ ಉದ್ಧರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ನೇತೃತ್ವ ವಹಿಸಿದ ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಾ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆ ಗುಣಗಳು ಮನುಷ್ಯನಲ್ಲಿ ಇಲ್ಲದಿರುವುದೇ ಅಶಾಂತಿ ಮತ್ತು ಅತೃಪ್ತಿಗಳಿಗೆ ಕಾರಣ ಎಂದರು.ಸಮಾರಂಭ ಉದ್ಘಾಟಿಸಿದ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರ ಮಾತನಾಡಿ, ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ೪೩ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ಪ್ರಾಪ್ತವಾಗಿರುವುದು ಪೂರ್ವಾರ್ಜಿತ ಪುಣ್ಯದ ಫಲವೆಂದು ಭಾವಿಸುವೆ ಎಂದರು.

ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಲಿಂ. ರಂಭಾಪುರಿ ವೀರಗಂಗಾಧರ ಶ್ರೀಗಳ ಜೀವನದ ಸಿದ್ಧಿ ಸಾಧನೆಗಳನ್ನು ಕುರಿತು ಮಾತನಾಡಿದರು. ಬಂಕಾಪುರ ರೇವಣಸಿದ್ಧ ಶಿವಾಚಾರ್ಯರು, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪ ಸುಜ್ಞಾನದೇವ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಕಲಘಟಗಿ ರೇವಣಸಿದ್ಧೇಶ್ವರ ಶಿವಾಚಾರ್ಯರು ಇತರರು ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು ವಹಿಸಿದ್ದರು.ಶಾಮನೂರು ಶಿವಶಂಕರಪ್ಪಗೆ ವೀರಗಂಗಾಧರ ಪ್ರಶಸ್ತಿ ಪ್ರದಾನ

ಲಕ್ಷ್ಮೇಶ್ವರ: ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಕೊಡಮಾಡಿದ ‘ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ’ಯನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ರಂಭಾಪುರಿ ಶ್ರೀಗಳಿಂದ ಸ್ವೀಕರಿಸಿದರು.

ಗುರುವಾರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ೪೩ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ. ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.