ಇನಾಯತ್ ಆಲಿ ಸರ್ವ ಧರ್ಮೀಯರಿಗೆ ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸೌಹಾರ್ದತೆ ಸಂಕೇತವಾಗಿದೆ. ಇದೇ ರೀತಿಯಲ್ಲಿ ಸೌಹಾರ್ದತೆಯು ಮುಂದುವರಿಯಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹೇಳಿದರು.
ಮೂಲ್ಕಿ: ಇನಾಯತ್ ಆಲಿ ಸರ್ವ ಧರ್ಮೀಯರಿಗೆ ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಸೌಹಾರ್ದತೆ ಸಂಕೇತವಾಗಿದೆ. ಇದೇ ರೀತಿಯಲ್ಲಿ ಸೌಹಾರ್ದತೆಯು ಮುಂದುವರಿಯಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹೇಳಿದರು.
ಇನಾಯತ್ ಅಲಿ ಅಭಿಮಾನಿ ಬಳಗದಿಂದ ಕಾವೂರು ಜಂಕ್ಷನ್ನ ಅಂಬೇಡ್ಕರ್ ಮೈದಾನದಲ್ಲಿ ವಿಶಿಷ್ಟ ರೀತಿಯಲ್ಲಿ ಜರುಗಿದ ದೀಪಾವಳಿ ಜ್ಯೋತಿ ಪರ್ವ ಸಂಭ್ರಮದಲ್ಲಿ ಅವರು ಮಾತನಾಡಿದ ಅವರು, ದೀಪಾವಳಿ ಮನಸ್ಸುಗಳನ್ನು ಬೆಸೆಯುವ ಸೌಹಾರ್ದತೆ ಮತ್ತು ಮಾನವೀಯತೆಯ ಮಹೋತ್ಸವವೂ ಆಗಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿಯವರ ಮಾರ್ಗದರ್ಶನದಲ್ಲಿ ಜರುಗಿದ ಈ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ ಗೋ ಪೂಜೆ ನೆರವೇರಿಸಲಾಯಿತು. ಸೌಹಾರ್ದತೆಗೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಇನಾಯತ್ ಅಲಿಯವರು, ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಕುಟುಂಬಗಳಿಗೆ ಗೋವುಗಳನ್ನು ದಾನ ಮಾಡಿದರು. ತಲಾ 25 ಸಾವಿರ ರು.ಗಳಂತೆ 100ಕ್ಕೂ ಅಧಿಕ ಬಡ ಕುಟುಂಬಗಳ ಮದುವೆಗಾಗಿ ಆರ್ಥಿಕ ಸಹಾಯ ಹಸ್ತಾಂತರಿಸಿದರು.ಸಮಾಜದ ಒಳಿತಿಗಾಗಿ ಹಗಲಿರುಳು ಶ್ರಮಿಸುವ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು, ಊರಿನ ಅಡಿಪಾಯದಂತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಹಾಗೂ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಅದ್ಧೂರಿಯಾಗಿ ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ಹಾಗೂ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.ಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು ಮಧುರ ಧ್ವನಿಯಲ್ಲಿ ‘ಸಂಗೀತ ಸಂಜೆʼ ಕಾರ್ಯಕ್ರಮ ಜನಮನಸೂರೆಗೊಂಡಿತು.ಮಕ್ಕಳಿಗೆ ಪಟಾಕಿ ವಿತರಣೆ, ಸೃಜನಶೀಲ ಗೂಡುದೀಪಗಳ ಸ್ಪರ್ಧೆ, ಅಂಬರದಲ್ಲಿ ಬಣ್ಣಗಳ ಜಾದೂ ಸೃಷ್ಟಿಸಿದ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಇಡೀ ಮೈದಾನಕ್ಕೆ ಮೆರುಗು ನೀಡಿದವು. ಶ್ರೀ ಶಿವಶಕ್ತಿ ಭಜನಾ ವೃಂದದ ಶ್ರದ್ಧಾಭರಿತ ಭಜನೆ, ವಿವಿಧ ಕಲಾ ತಂಡಗಳ ನೃತ್ಯ ರೂಪಕ ಪ್ರಸ್ತುತಗೊಂಡಿತು.
ಪಕ್ಷದ ಮುಖಂಡರಾದ ಮಮತಾ ಗಟ್ಟಿ, ಪುರುಷೋತ್ತಮ ಚಿತ್ರಾಪುರ, ಬಿ.ಎಲ್.ಪಿ. ಪದ್ಮನಾಭ ಕೋಟ್ಯಾನ್, ಆರ್. ಕೆ. ಪೃಥ್ವಿರಾಜ್, ಲಕ್ಷ್ಮೀಶ ಗಬಲಡ್ಕ, ಎಂ. ಜಿ. ಹೆಗಡೆ, ಗಂಗಾಧರ ಹೊಸಬೆಟ್ಟು, ಜಯಶೀಲ ಆದ್ಯಂತಾಯ, ಸುರೇಂದ್ರ ಕಂಬಳಿ, ರೂಪೇಶ್ ರೈ, ಕೃಷ್ಣ ಅಮೀನ್, ಯು. ಪಿ. ಇಬ್ರಾಹಿಂ, ಗಿರೀಶ್ , ಚಂದ್ರಹಾಸ ಅಮೀನ್ ಮತ್ತಿತರರು ಪಾಲ್ಗೊಂಡರು.