ಶಿವಮೊಗ್ಗ ಜಿಲ್ಲೆಯಾದ್ಯಂತ ದೀಪಾವಳಿ ಸಂಭ್ರಮ

| Published : Oct 22 2025, 01:03 AM IST

ಸಾರಾಂಶ

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಂಡು ಬಂದಿತು. ಶ್ರದ್ಧಾ- ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಶಿವಮೊಗ್ಗ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಂಡು ಬಂದಿತು. ಶ್ರದ್ಧಾ- ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಅಂಗಡಿ ಮಳಿಗೆಗಳು, ಶೋರೂಂಗಳು, ಗ್ಯಾರೇಜ್, ಕಚೇರಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಕೆಲವರು ನರಕ ಚತುರ್ಥಿ ದಿನವಾದ ಸೋಮವಾರ ರಾತ್ರಿಯೇ ಮನೆಗಳಲ್ಲಿ ಲಕ್ಷ್ಮೀ ಪೂಜೆ ನಡೆಸಿದರೆ, ಮಂಗಳವಾರ ಬೆಳಿಗ್ಗೆ, ಮಧ್ಯಾಹ್ನ ಮತ್ತಷ್ಟು ಜನರು ಪೂಜೆ ಮಾಡಿದರು. ಮಂಗಳವಾರವೂ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು.ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಮಲಕಿಗೆಗಳ ಮುಂದೆ ಜನಸಂದಣಿ ಇತ್ತು. ಹೊಸಬಟ್ಟೆ, ಪೂಜಾ ಸಾಮಗ್ರಿ, ಪಟಾಕಿ ಖರೀದಿ ಭರಾಟೆ ಜೋರಾಗಿತ್ತು. ಹಲವು ವೃತ್ತಗಳಲ್ಲಿ ಬಾಳೆಕಂದು, ಉತ್ರಾಣಿ, ಮಾವಿನಸೊಪ್ಪು, ಬಗೆಬಗೆಯ ಹೂವು, ಕುಂಬಳ ಕಾಯಿಗಳನ್ನು ಖರೀದಿಸಿದರು. ಈ ಬಾರಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಬಂದಿದ್ದು, ನಗರದ ಹಲವೆಡೆ ಚೆಂಡು ಹೂವು ಮಾರಾಟ ಜೋರಾಗಿತ್ತು. ಅದರ ಜೊತೆಗೆ ಆಕಾಶಬುಟ್ಟಿ, ಹಣತೆಗಳ ಮಾರಾಟವೂ ಹೆಚ್ಚಿತ್ತು.ಗಾಂಧಿ ಬಜಾರ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ವರ್ತಕರು ತಮ್ಮ ಅಂಗಡಿ ಮಳಿಗೆಗಳ ಎದುರು ಶಾಮಿಯಾನ, ರಂಗೋಲಿ ಹಾಕಿ, ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಕಂಡು ಬಂತು. ಅನೇಕರು ತಮ್ಮ ಮನೆಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿ, ಆಕಾಶಬುಟ್ಟಿ ಕಟ್ಟಿ ಬೆಳಕಿನ ಹಬ್ಬ ಆಚರಿಸಿದರು. ಬುಧವಾರ ಬಲಿಪಾಡ್ಯಮಿ ಇದ್ದು, ಹಬ್ಬಕ್ಕೆ ಮತ್ತಷ್ಟು ಮೆರುಗು ಸಿಗಲಿದೆ.