ಶೃಂಗೇರಿಯಲ್ಲಿ ಮಳೆ ಅಬ್ಬರದ ನಡುವೆಯೂ ದೀಪಾವಳಿ ಸಂಭ್ರಮ.

| Published : Oct 24 2025, 01:00 AM IST

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಮಳೆ ನಡುವೆ ದೀಪಾವಳಿ ಸಂಭ್ರಮ ಕಂಡುಬಂದಿತು. ಬಲಿಪಾಡ್ಯಮಿ ದಿನ ಬುಧವಾರ ಶ್ರೀಮಠದ ನರಸಿಂಹವನದಲ್ಲಿ ಗೋಪೂಜೆ, ಗೋಶಾಲೆಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗೋವುಗಳಿಗೆ ಪೂಜೆ ನೆರವೇರಿಸಿದರು.

- ಶ್ರೀ ಶಾರದಾ ಪೀಠದಲ್ಲಿ ಜಗದ್ಗುರುಗಳಿಂದ ಗೋಪೂಜೆ । ತಾಲೂಕಿನೆಲ್ಲೆಡೆ ಬಲಿಪಾಡ್ಯಮಿ । ಲಕ್ಷ್ಮಿಪೂಜೆ ಹಬ್ಬದ ಸಡಗರ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಮಳೆ ನಡುವೆ ದೀಪಾವಳಿ ಸಂಭ್ರಮ ಕಂಡುಬಂದಿತು. ಬಲಿಪಾಡ್ಯಮಿ ದಿನ ಬುಧವಾರ ಶ್ರೀಮಠದ ನರಸಿಂಹವನದಲ್ಲಿ ಗೋಪೂಜೆ, ಗೋಶಾಲೆಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗೋವುಗಳಿಗೆ ಪೂಜೆ ನೆರವೇರಿಸಿದರು.

ಗೋಶಾಲೆಯಲ್ಲಿ ಎಲ್ಲಾ ಹಸು, ಕರುಗಳಿಗೆ ಮೈತೊಳೆಸಿ, ಬಣ್ಣದ ಚಿತ್ತಾರ ಮೂಡಿಸಿ ರೇಶ್ಮೆ ಹೊದಿಕೆ ಹಾಕಲಾಗಿತ್ತು. ವಾದ್ಯ ಮೇಳ, ಛತ್ರಿ ಚಾಮರ ವೇದಘೋಷಗಳೊಂದಿಗೆ ಗೋಶಾಲೆಗೆ ಆಗಮಿಸಿದ ಶ್ರೀಗಳು ಗೋವುಗಳಿಗೆ ಆರತಿ ಬೆಳಗಿ ಸಿಹಿ ತಿನಿಸುಗಳನ್ನು ನೀಡಿದರು. ಗಜಶಾಲೆಯಲ್ಲಿ ಗಜಗಳಿಗೆ ಪೂಜೆ ನೆರವೇರಿಸಿ ಸಿಹಿತಿನಿಸಿದರು. ಇದಕ್ಕೂ ಮೊದಲು ಶ್ರೀ ಚಂದ್ರ ಮೌಳೀಶ್ವರ ಹಾಗೂ ಶ್ರೀ ಚಕ್ರಕ್ಕೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನರಸಿಂಹವನದ ಗೋಶಾಲೆಯಲ್ಲಿ ನೂತನ ಶ್ರೀ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿದರು.ಮಳೆ ದೇವರು ಕಿಗ್ಗಾದಲ್ಲಿ ಗೋಪೂಜೆ:

ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಆವರಣದಲ್ಲಿ ಬುಧವಾರ ಗೋಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಗೋವುಗಳಿಗೆ ಪೂಜೆ ನೆರವೇರಿಸಿ ಸಿಹಿ ತಿನಿಸು ನೀಡ ತಿನಿಸಲಾಯಿತು. ನಂತರ ಬಲಿ ಉತ್ಸವ ಸಹಿತ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ತಾಲೂಕಿನ ವಿವಿಧೆಡೆ ಗೋಪೂಜೆ, ಹಬ್ಬದ ಸಡಗರ:

ತಾಲೂಕಿನ ಕಿಗ್ಗಾ, ಕಸಬಾ ಸೀಮೆ ವ್ಯಾಪ್ತಿಯ ಎಲ್ಲೆಡೆ ಬೆಳಿಗ್ಗೆಯಿಂದಲೂ ಗೋಪೂಜೆ, ದೀಪಾವಳಿ ಸಡಗರ ಕಂಡುಬಂದಿತು. ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣ, ಹೂ ಹಾರಗಳಿಂದ ಅಲಂಕರಿಸಲಾಗಿತ್ತು. ಹಸು,ಕರುಗಳನ್ನು ಅಲಂಕರಿಸಿ ಆರತಿ ಬೆಳಗಿ, ಸಿಹಿ ತಿನಿಸಲಾಯಿತು. ಗಂಟೆಗಳ ಶಬ್ಧ ಝೇಂಕರಿಸತೊಡಗಿತು. ಪಟಾಕಿಗಳನ್ನು ಸಿಡಿಸಲಾಯಿತು.

ಅಂಗಡಿ, ಹೋಟೇಲುಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿತು. ಮನೆಗಳ ಎದುರು ಶುಭ್ರಗೊಳಿಸಿದ ವಾಹನಗಳಿಗೆ ಹೂ ಹಾರಗಳನ್ನು ಹಾಕಿ ಪೂಜೆ ಸಲ್ಲಿಸಲಾಯಿತು. ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಸಂಜೆ ಹೊಲಗೆದ್ದೆ, ಜಮೀನುಗಳಿಗೆ ದೊಂದಿ ದೀಪದ ಕೋಲು ಗಳನ್ನು ಹಚ್ಚಿ ಪೂಜಿಸಲಾಯಿತು. ಗ್ರಾಮೀಣ ಪ್ರದೇಶದೆಲ್ಲೆಡೆ ದೊಂದಿ ದೀಪಗಳು ಬೆಳಗಿಸಿ ಈ ಕೋಲುಗಳನ್ನು ಹಿಡಿದು ದೀಪಾವಳಿ ಘೋಷಣೆಗಳೊಂದಿಗೆ ಗದ್ದೆ, ಜಮೀನು, ದೇವಾಲಯಗಳ ಮುಂಬಾಗಗಳಲ್ಲಿ ಹಚ್ಚಲಾಯಿತು. ಮನೆ ಮನೆಗಳ ಮುಂಭಾಗದಲ್ಲಿ ಸಾಲು ಸಾಲು ಹಣತೆಗಳು ಪ್ರಜ್ವಲಿಸುತ್ತಿತ್ತು. ಸಂಜೆ ವಿಧವಿಧದ ಪಟಾಕಿ ಸಿಡಿಸಿ ಸಂಭ್ರಮಿಸ ಲಾಯಿತು. ಮಧ್ಯಾಹ್ನ ಮನೆ ಮನೆಗಳಲ್ಲಿ ಸಿಹಿ ಪದಾರ್ಥಗಳು ಸಹಿತ ಹಬ್ಬದ ಅಡುಗೆ ಊಟ ಸವಿಯಲಾಯಿತು.

ವಿವಿಧ ವೇಷಾಧಾರಿಗಳ ಕುಣಿತ:

ಕಳೆದ 3-4 ದಿನಗಳಿಂದ ತಾಲೂಕಿನೆಲ್ಲೆಡೆ ವಿವಿಧ ವೇಷದಾರಿಗಳು ಮನೆ ಮನೆಗಳ ಎದುರು ಹೋಗಿ ಮನರಂಜಿಸಿದರು. ಹುಲಿ ವೇಷ,ಕರಡಿ ವೇಷ,ಕೀಲು ಕುದುರೆ,ರಾವಣ ವೇಷ,ಯಮ,ಅಂಟಿಕೆ ಪಿಂಟಿಕೆ,ಜಾನಪದ ವೇಷಗಳು ಸೇರಿದಂತೆ ವಿವಿಧ ವೇಷಗಳು ದೀಪಾವಳಿಗೆ ಇನ್ನಷ್ಟು ಮೆರಗು ನೀಡಿತು.

23 ಶ್ರೀ ಚಿತ್ರ 1-

ಶೃಂಗೇರಿ ಶ್ರೀ ಶಾರದಾ ಪೀಠದ ನರಸಿಂಹವನದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗೆ ಗೋಪೂಜೆ ನೆರವೇರಿಸಿದರು.ನೆರವೇರಿಸಿದರು.