ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಲ್ಲಾದ್ಯಂತ ಭರ್ಜರಿ ಸಿದ್ಧತೆ ನಡೆದಿದೆ. ನಗರದ ಮಾರುಕಟ್ಟೆಗಳು ಹಬ್ಬದ ಖರೀದಿಯ ಕಳೆ ಪಡೆದುಕೊಂಡಿವೆ. ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ಬೆಳಕಿನಿಂದ ಅಲಂಕರಿಸಲು ಜನರು ಬಗೆಬಗೆಯ ಆಕಾಶಬುಟ್ಟಿ, ಹಣತೆ, ಅಲಂಕಾರಿಕ ವಸ್ತುಗಳು, ಹೂವು-ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಹಾವೇರಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಲ್ಲಾದ್ಯಂತ ಭರ್ಜರಿ ಸಿದ್ಧತೆ ನಡೆದಿದೆ. ನಗರದ ಮಾರುಕಟ್ಟೆಗಳು ಹಬ್ಬದ ಖರೀದಿಯ ಕಳೆ ಪಡೆದುಕೊಂಡಿವೆ. ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ಬೆಳಕಿನಿಂದ ಅಲಂಕರಿಸಲು ಜನರು ಬಗೆಬಗೆಯ ಆಕಾಶಬುಟ್ಟಿ, ಹಣತೆ, ಅಲಂಕಾರಿಕ ವಸ್ತುಗಳು, ಹೂವು-ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿರುವುದರಿಂದ ಅನ್ನದಾತರ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದೆ. ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ಹಾನಿಯಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆನಷ್ಟ ಪರಿಹಾರ ಹಾಗೂ ಬೆಳೆವಿಮೆ ಮೊತ್ತವೂ ಸಮರ್ಪಕವಾಗಿ ಕೈ ಸೇರದಿರುವುದು ಅವರ ಆತಂಕ ಹೆಚ್ಚಿಸಿದೆ. ಕೃಷಿ ಚಟುವಟಿಕೆ ಕುಂಠಿತಗೊಂಡಿರುವುದರಿಂದ ಕೃಷಿ ಕೂಲಿ ಕಾರ್ಮಿಕರಿಗೂ ಕೆಲಸದ ಕೊರತೆ ಎದುರಾಗಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಬ್ಬ ಆಚರಿಸಲು ರೈತ ಕುಟುಂಬಗಳು ಸಿದ್ಧತೆ ನಡೆಸಿವೆ. ಕೊನೆಯ ಕ್ಷಣದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಈ ಬಾರಿ ರೈತಾಪಿ ವರ್ಗದಲ್ಲಿ ಹಿಂದಿನ ವರ್ಷಗಳಂತೆ ಹಬ್ಬದ ಉತ್ಸಾಹ ಕಂಡುಬರುತ್ತಿಲ್ಲ.

ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆಗಳ ಮುಂದೆ ದೀಪ ಬೆಳಗಿಸಿ, ಬಣ್ಣಬಣ್ಣದ ಆಕಾಶಬುಟ್ಟಿಗಳನ್ನು ತೂಗುಹಾಕಿ ಸಂಭ್ರಮಿಸುವುದು ಹಬ್ಬದ ವಿಶೇಷ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿವಿಧ ಆಕಾರ, ವಿನ್ಯಾಸಗಳ ಆಕಾಶಬುಟ್ಟಿಗಳು ಲಗ್ಗೆ ಇಟ್ಟಿವೆ. ಗೋಳಾಕಾರ, ಚೌಕಾಕಾರ, ನಕ್ಷತ್ರ ಹಾಗೂ ಯು ಆಕಾರದ ಆಕಾಶಬುಟ್ಟಿಗಳು ಮಳಿಗೆಗಳಲ್ಲಿ ಸಾಲುಗಟ್ಟಿ ನಿಂತಿವೆ. ಸಾಂಪ್ರದಾಯಿಕ ವಿನ್ಯಾಸಗಳ ಜತೆಗೆ ಆಧುನಿಕ ಚಿತ್ತಾರಗಳಿರುವ ಆಕಾಶಬುಟ್ಟಿಗಳಿಗೂ ಬೇಡಿಕೆ ಹೆಚ್ಚಿದೆ.

ಒಂದು ಕಾಲದಲ್ಲಿ ಬಣ್ಣಬಣ್ಣದ ಕಾಗದಗಳಿಂದ ಮಾತ್ರ ತಯಾರಾಗುತ್ತಿದ್ದ ಆಕಾಶಬುಟ್ಟಿಗಳು ಈಗ ಸಾಕಷ್ಟು ರೂಪಾಂತರಗೊಂಡಿವೆ. ಕಾಗದದ ಜತೆಗೆ ರಟ್ಟು, ಫೈಬರ್, ಪ್ಲಾಸ್ಟಿಕ್ ಹಾಗೂ ಬಟ್ಟೆಗಳಿಂದಲೂ ಆಕರ್ಷಕ ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿನ್ಯಾಸ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿಯಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ದರದಲ್ಲಿಯೂ ಏರಿಕೆಯಾಗಿದೆ. ಆದರೂ ಹಬ್ಬದ ಸಿದ್ಧತೆಯ ಭಾಗವಾಗಿ ಜನರು ತಮ್ಮ ಆಯ್ಕೆಗೆ ತಕ್ಕಂತೆ ಆಕಾಶಬುಟ್ಟಿಗಳನ್ನು ಖರೀದಿಸುತ್ತಿದ್ದಾರೆ.

ಬೆಲೆ ಏರಿಕೆ; ಖರೀದಿಗೆ ಹಿಂದೇಟು:ದೀಪಾವಳಿ ಹಿನ್ನೆಲೆಯಲ್ಲಿ ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ಸಿಹಿತಿನಿಸು, ಮೇಣದಬತ್ತಿ, ಹಣತೆ ಹಾಗೂ ಆಕಾಶಬುಟ್ಟಿಗಳ ಖರೀದಿ ಜೋರಾಗಿದೆ. ಆದರೆ, ದಿನಬಳಕೆ ವಸ್ತುಗಳ ಜತೆಗೆ ಹಬ್ಬದ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದ್ದರೂ ವ್ಯಾಪಾರ ವಹಿವಾಟು ನಿರೀಕ್ಷಿತ ಮಟ್ಟದಲ್ಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಪ್ರಮಾಣ ಕಡಿಮೆಯಾಗಿದೆ. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಆಯ್ದುಕೊಂಡು ಖರೀದಿಸುತ್ತಿದ್ದು, ವ್ಯಾಪಾರಿಗಳಲ್ಲಿಯೂ ನಿರೀಕ್ಷಿತ ವ್ಯಾಪಾರವಾಗದಿರುವ ಆತಂಕ ಮೂಡಿದೆ.

ಜಾನುವಾರು, ವಾಹನಗಳಿಗೂ ಅಲಂಕಾರ: ದೀಪಾವಳಿ ಸಂದರ್ಭದಲ್ಲಿ ಕೃಷಿಕರ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತು ಸೇರಿದಂತೆ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕರಿಸುವ ಸಂಪ್ರದಾಯವಿದೆ. ಹೀಗಾಗಿ ಜಾನುವಾರುಗಳ ಅಲಂಕಾರಿಕ ಸಾಮಗ್ರಿಗಳ ಖರೀದಿಯೂ ನಡೆಯುತ್ತಿದೆ. ಮುಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ ಹಾಗೂ ಕೊಂಬುಗಳಿಗೆ ಹಚ್ಚುವ ಬಣ್ಣಗಳಿಗೆ ಬೇಡಿಕೆ ಕಂಡುಬಂದಿದೆ. ಮನೆಯ ಸದಸ್ಯರಿಗೆ ಹೊಸ ಬಟ್ಟೆ ಖರೀದಿಸುವ ಜತೆಗೆ ಜಾನುವಾರುಗಳಿಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಮೂಲಕ ರೈತರು ಹಬ್ಬದ ಸಂಭ್ರಮಕ್ಕೆ ಸಿದ್ಧರಾಗುತ್ತಿದ್ದಾರೆ. ಇದರೊಂದಿಗೆ ವಾಹನಗಳ ಅಲಂಕಾರಿಕ ಸಾಮಗ್ರಿಗಳ ಮಾರಾಟವೂ ಚುರುಕುಗೊಂಡಿದೆ.