ದೀಪಾವಳಿ: ಹೂವು, ಹಣ್ಣು ವ್ಯಾಪಾರಿಗಳ ಸ್ಥಳಾಂತರ

| Published : Oct 20 2025, 01:02 AM IST

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿ ಅಮವಾಸ್ಯೆ ಮುನ್ನಾ ದಿನವಾದ ಭಾನುವಾರ ನಗರದ ಹಳೆ ಪ್ರವಾಸಿ ಮಂದಿರ ರಸ್ತೆಯುದ್ದಕ್ಕೂ ಪ್ರತಿ ಹಬ್ಬಕ್ಕೂ ಬಗೆಬಗೆಯ ಹೂವು, ಹಣ್ಣು ಹಂಪಲು, ಬಾಳೆಕಂಬ, ಮಾವಿನ ತೋರಣ ಮಾರಾಟ ಮಾಡುತ್ತಿದ್ದವರನ್ನು ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನಕ್ಕೆ ಸಂಚಾರ ಪೊಲೀಸರು ಭಾನುವಾರ ಸ್ಥಳಾಂತರ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಕಿನ ಹಬ್ಬ ದೀಪಾವಳಿ ಅಮವಾಸ್ಯೆ ಮುನ್ನಾ ದಿನವಾದ ಭಾನುವಾರ ನಗರದ ಹಳೆ ಪ್ರವಾಸಿ ಮಂದಿರ ರಸ್ತೆಯುದ್ದಕ್ಕೂ ಪ್ರತಿ ಹಬ್ಬಕ್ಕೂ ಬಗೆಬಗೆಯ ಹೂವು, ಹಣ್ಣು ಹಂಪಲು, ಬಾಳೆಕಂಬ, ಮಾವಿನ ತೋರಣ ಮಾರಾಟ ಮಾಡುತ್ತಿದ್ದವರನ್ನು ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನಕ್ಕೆ ಸಂಚಾರ ಪೊಲೀಸರು ಭಾನುವಾರ ಸ್ಥಳಾಂತರ ಮಾಡಿದರು.

ಪ್ರತಿ ಹಬ್ಬ ಹರಿದಿನಗಳಲ್ಲಿ ಇಲ್ಲಿನ ಶ್ರೀ ಜಯದೇವ ವೃತ್ತದ ಬಳಿಯಿಂದ ರಾಜನಹಳ್ಳಿ ಹನುಮಂತಪ್ಪ ಛತ್ರದವರೆಗಿನ ರಸ್ತೆ ಇಕ್ಕೆಲಗಳಲ್ಲಿ ಹೂವು, ಹಣ್ಣು ಹಂಪಲು, ಬಾಳೆ, ಮಾವಿನ ತೋರಣ ಸೇರಿದಂತೆ ಪೂಜಾ ವಸ್ತು, ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ಅ.19ರಿಂದ 22ರವರೆಗೆ ಈ ಸ್ಥಳದ ಬದಲಾಗಿದೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಮಾರಾಟಕ್ಕೆ ಮಹಾ ನಗರ ಪಾಲಿಕೆ ಸೂಚಿಸಿದ್ದಾರೆ. ವ್ಯಾಪಾರಿಗಳು ದೀಪಾವಳಿ ಅಮವಾಸ್ಯೆ, ಪಾಢ್ಯದ, ಶ್ರೀ ಮಹಾಲಕ್ಷ್ಮಿ ಪೂಜೆಗೆ ಬೇಕಾದಂತಹ ವಸ್ತುಗಳನ್ನು ಶನಿವಾರ ರಾತ್ರಿ, ಭಾನುವಾರ ಬೆಳಗಿನ ಜಾವವೇ ವಾಹನಗಳಲ್ಲಿ, ದ್ವಿಚಕ್ರ ವಾಹನ, ಅಪೆ ವಾಹನದಲ್ಲಿ ತಂದು, ಹಳೆ ಪಿಬಿ ರಸ್ತೆಯಲ್ಲಿ ಇಳಿಸಿಕೊಂಡಿದ್ದರು.

ಪ್ರತಿ ಹಬ್ಬದ ವೇಳೆ ತಾವು ಊರಿನಿಂದ ತಂದ ವಸ್ತುಗಳನ್ನು ಮಾರಲೆಂದು ಹಳೆ ಪ್ರವಾಸಿ ಮಂದಿರ ಬಳಿ ಕಳೆದ ರಾತ್ರಿ, ಶನಿವಾರ ಬೆಳಗಿನ ಜಾವ ಇಳಿಸಿಕೊಂಡವರಿಗೆ ಬೆಳಕಾದ ನಂತರ ಸಂಚಾರ ಪೊಲೀಸರು ಬಂದು ಇಲ್ಲಿ ಮಾರಾಟಕ್ಕೆ ಅವಕಾಶ ಇಲ್ಲವೆಂದು ಹೇಳಿದಾಗ ಧಿಕ್ಕೇ ತೋಚದಂತಾಗಿದೆ.

ಹಳೆ ಪ್ರವಾಸಿ ಮಂದಿರ ರಸ್ತೆಯು ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲೊಂದಾಗಿದ್ದು, ಇದೇ ರಸ್ತೆಯ ಪಕ್ಕದಲ್ಲಿ ಬರುವಂತ ಹಳೆ ಕೋರ್ಟ್ ರಸ್ತೆ ಹಾಗೂ ಅಶೋಕ ರಸ್ತೆಗಳು ಒಮ್ಮುಖ ರಸ್ತೆಗಾಗಿವೆ. ಜಯದೇವ ವೃತ್ತ-ರಾಜನಹಳ್ಳಿ ಹನುಮಂತಪ್ಪ ಛತ್ರದ ಮಧ್ಯೆ ಸಾಗುವ ಹಳೆ ಪ್ರವಾಸಿ ಮಂದಿರ ರಸ್ತೆಯು ದ್ವಿಮುಖ ರಸ್ತೆಯಾಗಿದ್ದು, ಸಹಜವಾಗಿಯೇ ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟವಾಗಿರುತ್ತದೆ.

ಹಳೆ ಪಿಬಿ ರಸ್ತೆ, ಹಳೆ ಪ್ರವಾಸಿ ಮಂದಿರ ರಸ್ತೆ, ಅಶೋಕ ರಸ್ತೆ, ಹಳೆ ಕೋರ್ಟ್ ರಸ್ತೆಗಳಲ್ಲಿ ವಾಹನ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಭಾನುವಾರದಿಂದ ಮೂರು ದಿನಗಳವರೆಗೆ ಹೂವು, ಹಣ್ಣು ಹಂಪಲು, ಬಾಳೆ ಕಂಬ, ಮಾವಿನ ತೋರಣ, ಬೂದು ಕುಂಬಳಕಾಯಿ, ಕಾಚಿಕಡ್ಡಿ, ಸೆಗಣಿ, ಬ್ರಹ್ಮದಂಡಿ ಇತರ ವಸ್ತುಗಳನ್ನು ವ್ಯಾಪಾರ ಮಾಡಲು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ವ್ಯಾಪಾರ ಮಾಡಿದ ಉಳಿದ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು, ಎಲ್ಲೆಂದರಲ್ಲಿ ಬಿಸಾಡದೇ ವಾಪಸ್ಸು ಒಯ್ಯುವಂತೆ, ತಪ್ಪಿದಲ್ಲಿ ಪ್ರತಿ ಮಾರಾಟಗಾರರಿಂದ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನೂ ವಸೂಲಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ರೇಣುಕಾ ತಿಳಿಸಿದ್ದಾರೆ.

ಬೆಳ್ಳಂ ಬೆಳಿಗ್ಗೆಯೇ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಹಳೆ ಪ್ರವಾಸಿ ಮಂದಿರ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಹಬ್ಬದ ವಸ್ತುಗಳನ್ನು ಮಾರಾಟಕ್ಕೆ ಮುಂದಾದ ಚಿಕ್ಕಪುಟ್ಟ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ರೈತ ಕುಟುಂಬದವರಿಗೆ ಅಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಿಲ್ಲ. ಕೆಲವರಿಗೆ ಜೋರುಬಾಯಿ ಮಾಡಿ, ಮತ್ತೆ ಕೆಲವರಿಗೆ ಎಳೆದಾಡಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ವ್ಯಾಪಾರ ಮಾಡಿಕೊಳ್ಳುವಂತೆ ಪೊಲೀಸರು ಎಚ್ಚರಿಸಿ, ಕಳಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಹೀಗಾದರೆ ನಾವು ನಾಲ್ಕು ಕಾಸು ದುಡಿಯೋಣ ಅಂತಾ ಇಲ್ಲಿಗೆ ಬಂದಿರುತ್ತೇವೆ. ನಮ್ಮ ಕಷ್ಟ, ನಷ್ಟ ಯಾರು ಕೇಳಬೇಕು? ಇಲ್ಲಿನ ತಂದಿದ್ದನ್ನೆಲ್ಲಾ ಹರಡಿಕೊಂಡಿದ್ದೇವೆ. ಮತ್ತೆ ಇಲ್ಲಿಂದ ಅಲ್ಲಿಗೆ ಒಯ್ಯಲು ಗಾಡಿ ಬಾಡಿಗೆಗೆ ಹಣ ಹೊಂದಿಸಬೇಕಾಗಿದೆ ಎಂದು ಸಣ್ಣಪುಟ್ಟ ವ್ಯಾಪಾರಸ್ಥರು ಅಳಲು ತೋಡಿಕೊಂಡರು.