ಸಾರಾಂಶ
ಪಟ್ಟಣದ ಪ್ರಮುಖ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ.
ಹರಪನಹಳ್ಳಿ: ಹೂವು ಸೇರಿದಂತೆ ಪೂಜಾ ಪರಿಕರಗಳ ದರ ಸಾಕಷ್ಟು ಹೆಚ್ಚಾಗಿದ್ದರೂ ತಾಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಜನತೆ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಸೋಮವಾರದಿಂದ ಆರಂಭವಾಗಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರದ ವರೆಗೂ ನಡೆಯಲಿದ್ದು, ಈ ಕಾರಣದಿಂದ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಜನತೆ ಶನಿವಾರದಿಂದಲೇ ಖರೀದಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ.ಪುರಸಭಾ ಕಚೇರಿ ಎದುರಿಗೆ, ಟಾಕೀಸ್ ರಸ್ತೆ, ಗೌಳೇರ ಬೀದಿ, ಹೊಸ ಬಸ್ ನಿಲ್ದಾಣದ ಸುತ್ತಮುತ್ತ ಹೂವು, ಅಲಂಕಾರಿಕಾ ವಸ್ತುಗಳನ್ನು ಮಾರಾಟ, ಖರೀದಿ ಜೋರಾಗುತ್ತಿದೆ.
ದೀಪಾವಳಿಗೆ ಹೆಚ್ಚು ಖರೀದಿಯಾಗುವುದು ಸೇವಂತಿಗೆ ಹಾಗೂ ಚೆಂಡಿಹೂವು. ಆದರೆ ಮಳೆಯಿಂದಾಗಿ ಸೇವಂತಿ ಹಾಗೂ ಚೆಂಡು ಹೂವಿನ ಬೆಳೆಗಳು ಹಾನಿಗೀಡಾಗಿದ್ದು, ಗುಣಮಟ್ಟದ ಹೂವು ಮಾರುಕಟ್ಟೆಗೆ ಬರುತ್ತಿಲ್ಲ. ಸೇವಂತಿ, ಮಲ್ಲಿಗೆ ಹೂವುಗಳು ಒಂದು ಮಾರಿಗೆ ₹80ರಿಂದ 100 ಇವೆ. ಬೂದುಗುಂಬಳ ಕಾಯಿ, ಬಾಳೆ ದಿಂಡು, ಉತ್ತರಾಣಿ ಕಡ್ಡಿ, ಬೆಳವಲ ಕಾಯಿ, ತೆಂಗಿನಕಾಯಿ ಮಾರಾಟ ಬಿರುಸಿನಿಂದ ಸಾಗಿದೆ.ದೀಪಾವಳಿಗೆ ಹಣತೆ ವ್ಯಾಪಾರ ಸಹ ಜೋರಾಗಿದೆ. ಮಣ್ಣಿನ ಪುಟ್ಟ ದೀಪಗಳಿಂದ ಹಿಡಿದು ತರಹೇವಾರಿ ವಿನ್ಯಾಸದ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ. ಆಕಾಶದೀಪ, ಅಲಂಕೃತ ವಿದ್ಯುತ್ ದೀಪಗಳ ಮಾಲೆ ಪರಂಪರೆಗಳಿಗೂ ಹೆಚ್ಚಿನ ಬೇಡಿಕೆ ಇದೆ.
ಪಟ್ಟಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್ ) ನಿರ್ದೆಶಕರ ಚುನಾವಣೆ ಅ. 26ರಂದು ನಡೆಯಲಿದೆ. ಅ. 20 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದರಿಂದ ದೀಪಾವಳಿ ಮದ್ಯೆಯೂ ಕಾರ್ಯಕರ್ತರು ಅದರಲ್ಲಿ ಬ್ಯೂಸಿಯಾಗಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ದೀಪಾವಳಿ ಹಿನ್ನೆಲೆಯಲ್ಲಿ ತಾಲೂಕಿನ ಮಾರುಕಟ್ಟೆಗಳು ರಂಗೇರಿದೆ.