ಈಗಾಗಲೇ ದಿನಸಿ ಸಾಮಗ್ರಿಗಳು, ಹಾಲು, ಮೊಸರು ಇತ್ಯಾದಿಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರು ಈಗ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಕ್ಕೂ ಹೂವು-ಹಣ್ಣುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೀಗಾಗಿ ಜನರು ಕಡಿಮೆ ಪ್ರಮಾಣದಲ್ಲಿ ಖರೀದಿಸುವ ಅನಿವಾರ್ಯ ಸ್ಥಿತಿಗೆ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈಗಾಗಲೇ ದಿನಸಿ ಸಾಮಗ್ರಿಗಳು, ಹಾಲು, ಮೊಸರು ಇತ್ಯಾದಿಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರು ಈಗ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಕ್ಕೂ ಹೂವು-ಹಣ್ಣುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೀಗಾಗಿ ಜನರು ಕಡಿಮೆ ಪ್ರಮಾಣದಲ್ಲಿ ಖರೀದಿಸುವ ಅನಿವಾರ್ಯ ಸ್ಥಿತಿಗೆ ಬಂದಿದ್ದಾರೆ.

ಸೇಬು, ದಾಳಿಂಬೆ, ಸೀಬೆ ಹಣ್ಣು, ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಸೇವಂತಿ, ಗುಲಾಬಿ, ಕನಕಾಂಬರ ಸೇರಿದಂತೆ ಇನ್ನಿತರ ಹೂವುಗಳ ಬೆಲೆಯು ದೀಪಾವಳಿ ವೇಳೆ ಬಹುತೇಕ ದುಪ್ಪಟ್ಟಾಗಿದೆ. ದೀಪಾವಳಿ ಹಬ್ಬದ ವೇಳೆ ವಾಣಿಜ್ಯ ಮಳಿಗೆಗಳು, ಅಂಗಡಿ, ಕಚೇರಿ, ಕಾರ್ಖಾನೆಗಳಲ್ಲಿ ತಳಿರು-ತೋರಣಗಳಿಂದ ಅಲಂಕರಿಸಿ ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಬೆಲೆ ಏರಿಕೆಯಿಂದ ಹಬ್ಬ ಆಚರಿಸುವವರು ಹೂವು ಹಣ್ಣುಗಳ ಬೆಲೆ ಕೇಳಿ ಸುಸ್ತಾಗಿದ್ದಾರೆ. ಆದರೆ, ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಎಂದಿನಂತೆ ಸಂಪ್ರದಾಯದಂತೆ ಆಚರಿಸಬೇಕಂದು ಅನಿವಾರ್ಯವಾಗಿ ಖರೀದಿಯ ಪ್ರಮಾಣವನ್ನು ಕೊಂಚ ಕಡಿಮೆ ಮಾಡಿರುವುದು ಕಂಡು ಬಂದಿದೆ.

ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಬನಶಂಕರಿ, ಯಶವಂತಪುರ, ಕೆ.ಆರ್.ಪುರ, ಯಲಹಂಕ ಸೇರಿದಂತೆ ಸೇರಿದಂತೆ ನಗರದ ಪ್ರಮುಖ ಹೂವು, ಹಣ್ಣು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಪ್ರಮುಖವಾಗಿ ಬಳಕೆಯಾಗುವ ಸೇವಂತಿ ಹೂವಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ 65-70 ರು.ಗೆ ಸಿಗುತ್ತಿದ್ದ ಸೇವಂತಿ ಹೂವಿನ ಬೆಲೆ 200 ರು. ತಲುಪಿದೆ. 100 ರು. ಇದ್ದ ಪ್ರತಿ ಕೆ.ಜಿ ಗುಲಾಬಿ ಹೂವಿನ ಬೆಲೆ 250 ರು.ಯಿಂದ 300 ರು.ಗೆ ತಲುಪಿದೆ. ಕನಕಾಂಬರ ಹೂವು ಕೆ.ಜಿಗೆ 800 ರು. ಇದ್ದದ್ದು, ಒಂದುವರೆ ಸಾವಿರ ರು.ಗೆ ತಲುಪಿದೆ.

ಕೆಲ ದಿನಗಳ ಹಿಂದಷ್ಟೇ ನಗರದ ಹೊರ ವಲಯದಲ್ಲಿ ಹೂವು ಖರೀದಿಸುತ್ತಿಲ್ಲ ಎಂದು ರೈತರು, ಹೂ ಬೆಳೆಗಾರರು ಕೆಲವೆಡೆ ಹೂವನ್ನು ಚೆಲ್ಲಿದ್ದರು. ಪ್ರತಿ ಕೆ.ಜಿ ಸೇವಂತಿ ಹೂವನ್ನು ಬರೀ 30 ರು.ಗೆ ವ್ಯಾಪಾರಿಗಳು ಮಾರಾಟ ಮಾಡಿದ್ದರು. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಬಂದಿದೆ. ರೈತರಿಗೆ ಅನುಕೂಲವಾಗುತ್ತದೆ ಎಂದು ಕೆಲವು ವ್ಯಾಪಾರಿಗಳು, ಗ್ರಾಹಕರು, ಅಭಿಪ್ರಾಯಪಟ್ಟರು.

ಇನ್ನು ಹಣ್ಣುಗಳ ಪೈಕಿ ಥೈಲ್ಯಾಂಡ್ ಸೀಬೆ ಹಣ್ಣು 80 ರಿಂದ 100 ರು. ಇದ್ದದ್ದು 160 ರು.ವರೆಗೆ ಏರಿಕೆಯಾಗಿದೆ. ಸಾಮಾನ್ಯ ಸೇಬು ಕೂಡ ಸರಾಸರಿ 120 ರು.ಯಿಂದ 180 ರು. ಇದ್ದದ್ದು 250 ರು.ನಿಂದ 350 ರು.ವರೆಗೆ ಮಾರಾಟವಾಗುತ್ತಿದೆ. ಏಳಕ್ಕಿ ಬಾಳೆ ಹಣ್ಣು 120 ರು.ನಿಂದ 130 ರು.ವರೆಗೆ ಮಾರಾಟವಾಗುತ್ತಿದೆ. ‘ಹಬ್ಬದ ವೇಳೆ ಹೂವು, ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿಯೇ ಇರುತ್ತದೆ. ಪ್ರಮುಖ ಹಬ್ಬವನ್ನು ಹೂವು-ಹಣ್ಣು ಇಲ್ಲದೇ ಮಾಡಲು ಆಗುವುದೇ’ ಎಂದು ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ಪ್ರತಾಪ್ ಎಂಬುವರು ಹೇಳಿದರು.

ಇನ್ನು ನಗರದ ಪ್ರಮುಖ ಹೂವು-ಹಣ್ಣುಗಳ ಮಾರುಕಟ್ಟೆ ಆಗಿರುವ ಕೆ.ಆರ್. ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ನಸುಕಿನ 3 ಗಂಟೆಯಿಂದಲೇ ಜನರು ಹೂವುಗಳ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಯು ಇಡೀ ದಿನ ಹಬ್ಬದ ಖರೀದಿ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು.