ದೀಪಾವಳಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಜನರು ಖರೀದಿ ಮಾಡಿದರು. ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಸಲು ಜನಜಂಗುಳಿಯೇ ಸೇರಿತ್ತು. ಸಂಜೆ ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ಖರೀದಿ ಜೋರಾಗಿದ್ದರಿಂದ ಸಂಚರಿಸಲು ಪರದಾಡುವಂತಾಯಿತು.

ಭಟ್ಕಳ: ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯಿಂದ ರಾತ್ರಿ ವರೆಗೂ ದೀಪಾವಳಿ ಹಬ್ಬದ ಸಾಮಗ್ರಿ ಖರೀದಿ ಭರದಿಂದ ನಡೆಯಿತು. ಪೇಟೆಯಲ್ಲಿ ಎಲ್ಲಿ ನೋಡಿದರೂ ಖರೀದಿಸುವವರ ಸಂಖ್ಯೆ ಹೆಚ್ಚು ಕಂಡುಬಂತು.

ಪಟ್ಟಣಕ್ಕೆ ದೀಪಾವಳಿಗೋಸ್ಕರ ಬಂದ ಮಣ್ಣಿನ ವಿವಿಧ ಮಾದರಿಯ ಹಣತೆ ಸೇರಿದಂತೆ ಅಲಂಕಾರಿಕ ಸಾಮಗ್ರಿಗಳು ಗಮನ ಸೆಳೆಯಿತು. ದೀಪಾವಳಿಗೆ ಅತಿ ಅಗತ್ಯವಾದ ಸೌತೆಕಾಯಿ, ಮೊಗೇಕಾಯಿಯನ್ನು ಜನರು ಖರೀದಿಸಿದರು. ವಿವಿಧ ಭಾಗದಿಂದ ಹೂವುಗಳ ರಾಶಿಯೇ ಬಂದಿದ್ದು, ಜನರು ಇಂದು ದರ ಜಾಸ್ತಿ ಆಗುವ ಸಾಧ್ಯತೆ ಇರುವುದರಿಂದ ಮುಗಿಬಿದ್ದು ಖರೀದಿಸಿದರು.

ದೀಪಾವಳಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಜನರು ಖರೀದಿ ಮಾಡಿದರು. ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಸಲು ಜನಜಂಗುಳಿಯೇ ಸೇರಿತ್ತು. ಸಂಜೆ ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ಖರೀದಿ ಜೋರಾಗಿದ್ದರಿಂದ ಸಂಚರಿಸಲು ಪರದಾಡುವಂತಾಯಿತು.

ದರ ಏರಿಕೆಯ ಬಿಸಿಯ ಮಧ್ಯೆಯೂ ಜನರು ದೀಪಾವಳಿ ಹಬ್ಬದ ಖರೀದಿಯನ್ನು ವರ್ಷಂಪ್ರತಿಯಂತೆ ಮುಂದುವರಿಸಿದರು. ಈ ವೇಳೆ ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರು ಮಾತನಾಡಿ, ಕಳೆದ ವರ್ಷಕ್ಕಿಂತ ಈ ಸಲ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗಿದೆ. ಬೆಲೆ ಜಾಸ್ತಿ ಆಗಿದೆ ಎಂದು ದೀಪಾವಳಿ ಹಬ್ಬದ ಖರೀದಿ ನಿಲ್ಲಿಸುವುದಕ್ಕೆ ಆಗುತ್ತಾ। ಹಬ್ಬ ಮಾಡಲೇಬೇಕು ಎಂದು ಹೇಳಿದರು.

ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಮನೆಗಳಲ್ಲಿ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ದೀಪಾವಳಿಯ ಪ್ರಯುಕ್ತ ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ಬಲೀಂದ್ರ ಅಜ್ಜನನ್ನೂ ಕರೆದು ಪೂಜಿಸುತ್ತಾರೆ. ಅಂಗಡಿ, ಮನೆಗಳಲ್ಲಿ ಅಮಾವಾಸ್ಯೆಯಂದು ವಿಶೇಷವಾಗಿ ಧನಲಕ್ಷ್ಮೀ ಪೂಜೆ ನೆರವೇರಿಸುತ್ತಾರೆ. ವಾಹನ ಇದ್ದವರೂ ವಾಹನ ಪೂಜೆ ಮಾಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.