ಸಾರಾಂಶ
ಚಿತ್ರದುರ್ಗ: ದೀಪಗಳ ಹಬ್ಬ ದೀಪಾವಳಿಗೆ ಮಹಿಳೆಯರಿಂದ ಖರೀದಿ ಭರಾಟೆ ಚಿತ್ರದುರ್ಗದಲ್ಲಿ ಜೋರಾಗಿತ್ತು. ಅಮವಾಸ್ಯೆ ಮುಗಿದ ನಂತರ ಹಬ್ಬದ ಪ್ರಾಮುಖ್ಯತೆ ತೆರೆದುಕೊಳ್ಳಲಿದ್ದು, ಇದಕ್ಕಾಗಿ ಗುರುವಾರದಿಂದಲೇ ಸಿದ್ಧತೆಗಳು ನಡೆದಿದ್ದ ದೃಶ್ಯ ಸಾಮಾನ್ಯವಾಗಿತ್ತು.ಹಬ್ಬಕ್ಕಾಗಿ ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದರು. ಗುರುವಾರವೇ ನರಕ ಚತುದರ್ಶಿಯೊಂದಿಗೆ ಬಹುತೇಕರು ನೆಂಟರು, ಬಂಧು, ಮಿತ್ರರನ್ನು ಹಬ್ಬಕ್ಕೆ ಸ್ವಾಗತಿಸಿ ಸಂಭ್ರಮದಲ್ಲಿ ತೇಲಾಡಿದರು. ಕೆಲವೆಡೆ ಹಿರಿಯರ ಹಬ್ಬ ಆಚರಿಸಿ ಹೋಳಿಗೆ ನೇವೇದ್ಯ ಮಾಡಿದರು. ಸೂರ್ಯ ಮುಳುಗುತ್ತಿದ್ದಂತೆ ಆಗಸನದಲ್ಲಿ ಪಟಾಕಿಗಳು ಚಿತ್ತಾರ ಬಿಡಿಸಿದವು. ಹಣತೆ , ಹೊಂಬಾಳೆ, ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ಬಿಲ್ವ ಪತ್ರೆ, ತಂಗಟೆ ಮತ್ತು ತುಂಬೆ ಹೂ, ವಿವಿಧ ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ನಗರದ ಹೃದಯ ಭಾಗದಲ್ಲಿರುವ ಹಳೆ ಮಾಧ್ಯಮಿಕ ಶಾಲಾ ಆವರಣ, ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿ ನಡೆಯಿತು.
ಮಧ್ಯ ಕರ್ನಾಟಕದಲ್ಲಿ ಸಹಜವಾಗಿ ಯುಗಾದಿ ಹಾಗೂ ದೀಪಾವಳಿಗೆ ಹೊಸ ಉಡುಗೆ ತೊಡುತ್ತಾರೆ. ಹಾಗಾಗಿ ಬಟ್ಟೆ ಅಂಗಡಿಗಳು ಮಹಿಳೆಯರು, ಮಕ್ಕಳಿಂದ ತುಂಬಿ ತುಳುಕಾಡಿದವು. ಗ್ರಾಹಕರ ಸದಭಿರುಚಿಗೆ ತಕ್ಕಂತೆ ಆಕರ್ಷಕ ಉಡುಪುಗಳನ್ನು ವ್ಯಾಪರಸ್ಥರು ಮಾರಿದರು. ಮಂಗಳವಾರ ಮತ್ತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ದೀಪಗಳನ್ನು ಮಹಿಳೆಯರು ಮುಗಿ ಬಿದ್ದು ಖರೀದಿಸಿದ್ದರಿಂದ ಗುರುವಾರ ಅಷ್ಟಾಗಿ ದೀಪಗಳ ಖರೀದಿಯಲ್ಲಿ ಭರಾಟೆ ಕಾಣಲಿಲ್ಲ. 50 ರು. ನಿಂದ 200 ರು. ವರೆಗೊ ಅಲಂಕಾರಿಕ ದೀಪಗಳು ಮಾರಾಟವಾದವು. ಕುಸಿತ ಕಂಡಿದ್ದ ತೆಂಗಿನಕಾಯಿ ದರ ದೀಪಾವಳಿ ಅಂಗವಾಗಿ ತುಸು ಹೆಚ್ಚಳವಾಗಿತ್ತು. 20 ರು. ನಿಂದ 40 ರು.ವರೆಗೂ ಮಾರಾಟವಾದವು. ಹಸಿರು ಪಟಾಕಿಗಳ ಒಲವು ಹೆಚ್ಚುತ್ತಿರುವ ಕಾರಣ ಅನೇಕ ನಾಗರಿಕರು ವ್ಯಾಪಾರಸ್ಥರ ಬಳಿ ಕೇಳಿ ಪಡೆದರು. ಪಟಾಕಿ ಮಳಿಗೆಗಲ್ಲಿ ಅಷ್ಟಾಗಿ ನೂಕು ನುಗ್ಗಲು ಕಾಣಲಿಲ್ಲ