ಮೆರವಣಿಗೆಯಲ್ಲಿ ಡಿಜೆ ಬಳಸುವಂತಿಲ್ಲ: ಎಸ್ಪಿ ಡಾ. ವಿಕ್ರಂ ಅಮಟೆ

| Published : Aug 27 2025, 01:00 AM IST

ಮೆರವಣಿಗೆಯಲ್ಲಿ ಡಿಜೆ ಬಳಸುವಂತಿಲ್ಲ: ಎಸ್ಪಿ ಡಾ. ವಿಕ್ರಂ ಅಮಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸಬಾರದೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿವೆ. ಹಾಗಾಗಿ ಗೌರಿ - ಗಣೇಶ ಮತ್ತು ಈದ್ ಮಿಲಾದ್‌ ವೇಳೆಯಲ್ಲಿ ಡಿಜೆ ಬಳಸಬಾರದೆಂದು ಸಂಘಟಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದ್ದಾರೆ.

- ಜಿಲ್ಲೆಯಲ್ಲಿ 1730 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ । 7 ಅತಿ ಸೂಕ್ಷ್ಮ ಪ್ರದೇಶಗಳು । ಸಾಮಾಜಿಕ ಜಾಲ ತಾಣದ ಮೇಲೆ ನಿಗಾ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸಬಾರದೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿವೆ. ಹಾಗಾಗಿ ಗೌರಿ - ಗಣೇಶ ಮತ್ತು ಈದ್ ಮಿಲಾದ್‌ ವೇಳೆಯಲ್ಲಿ ಡಿಜೆ ಬಳಸಬಾರದೆಂದು ಸಂಘಟಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದ್ದಾರೆ.

ಈ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದೆ ಹೋದರೆ ಸಂಬಂಧಪಟ್ಟ ಸಂಘಟನೆ ಮುಖಂಡರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ 1730 ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇವುಗಳಲ್ಲಿ 7 ಅತಿ ಸೂಕ್ಷ್ಮ ಹಾಗೂ 157 ಸೂಕ್ಷ್ಮ ಗಣಪತಿಗಳೆಂದು ಗುರುತಿಸಲಾಗಿದೆ. ಹಾಗೆಯೇ 27 ಕಡೆಗಳಲ್ಲಿ ಈದ್‌ ಮಿಲಾದ್‌ ಮೆರವಣಿಗಳು ನಡೆಯಲಿದ್ದು, ಈ ಪೈಕಿ 3 ಅತಿ ಸೂಕ್ಷ್ಮ ಪ್ರದೇಶ ಗಳೆಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಜತೆಗೆ ಹೊರ ಜಿಲ್ಲೆಗಳಿಂದ 4 ಕೆಎಸ್‌ಆರ್‌ಪಿ ಹಾಗೂ 350 ಮಂದಿ ಹೋಂ ಗಾರ್ಡ್‌ಗಳನ್ನು ಬಂದೋಬಸ್ತ್‌ಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೌರಿ - ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬ ಒಟ್ಟಿಗೆ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಮಟ್ಟ ಹಾಗೂ ಉಪ ವಿಭಾಗ ಮಟ್ಟದಲ್ಲಿ ಪೊಲೀಸ್ ಇಲಾಖೆ ಉಭಯ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಕೆಲವು ಸಲಹೆ ನೀಡಿದೆ. ಇದರ ಜತೆಗೆ ಕಂದಾಯ, ಪೊಲೀಸ್‌, ಅರಣ್ಯ, ಅಗ್ನಿಶಾಮಕ ದಳ, ಮೆಸ್ಕಾಂ ಅಧಿಕಾರಿಗಳ ಸಮನ್ವಯ ಸಭೆ ಸಹ ನಡೆಸಲಾಗಿದೆ.

ಡಿಜೆ ಬಳಕೆ ನಿಷೇಧ ಮಾಡಲಾಗಿರುವ ನ್ಯಾಯಾಲಯದ ಆದೇಶ ಸಂಘಟಕರ ಗಮನಕ್ಕೂ ತರಲಾಗಿದೆ. ಅವರು ಸಹ ಸಹಮತ ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ಜಿಲ್ಲೆಯಲ್ಲಿ ಡಿಜೆ ಬಳಸಬಾರದೆಂದು ಸೂಚನೆ ನೀಡಲಾಗಿದೆ ಎಂದು ಹೇಳಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಚೋದನಕಾರಿ ಬ್ಯಾನರ್‌ ಹಾಕ ಬಾರದು. ಕಾರ್ಯಕ್ರಮದ ಬ್ಯಾನರ್‌ಗಳು ಹಾಕುವುದಾದರೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯು ವುದು ಕಡ್ಡಾಯ. ಸಂಘಟಕರಿಗೆ ಅನುಮತಿ ಪಡೆಯಲು ಜಿಲ್ಲೆಯ 17 ಕಡೆಗಳಲ್ಲಿ ಸಿಂಗಲ್‌ ವಿಂಡೋ ಸಿಸ್ಟಮ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.16 ಕಡೆಗಳಲ್ಲಿ ಚೆಕ್‌ ಪೋಸ್ಟ್‌: ಚಿಕ್ಕಮಗಳೂರು ಜಿಲ್ಲೆಯ ಸುತ್ತಲೂ 8 ಜಿಲ್ಲೆಗಳ ಗಡಿ ವ್ಯಾಪ್ತಿ ಇದೆ. ಹೊರ ಜಿಲ್ಲೆಗಳಿಂದ ಬರುವ ಮಾರ್ಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಒಟ್ಟು 16 ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆ ಈವರೆಗೆ ಸುಮಾರು 40 ಸಾವಿರ ಸೋಸಿಯಲ್‌ ಮೀಡಿಯಾದ ಖಾತೆಗಳ ಮೇಲೆ ಕಣ್ಣಿಟ್ಟಿದೆ. ಪ್ರತಿದಿನ ಅವುಗಳ ಮೇಲೆ ನಿಗಾ ಇಡಲಾಗಿದೆ. ಬೇರೆ ಧರ್ಮದ ವಿರುದ್ಧ ಪ್ರಚೋದನ ಕಾರಿ ಪೋಸ್ಟ್‌ ಮಾಡಿದರೆ, ಸುಳ್ಳು ಸುದ್ದಿ ಹಾಕಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

26 ಕೆಸಿಕೆಎಂ 4ಡಾ. ವಿಕ್ರಂ ಅಮಟೆ,