ಡಿಜೆಗೆ ಅನುಮತಿ ಇಲ್ಲ, 28 ಜನ ಗಡೀಪಾರು

| Published : Aug 19 2025, 01:00 AM IST

ಸಾರಾಂಶ

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಉಭಯ ಧರ್ಮೀಯರು ಶಾಂತಿ, ಸೌಹಾರ್ದತೆಯಿಂದ ಆಚರಿಸಿ, ಇತರರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಗಣೇಶ ಚತುರ್ಥಿ-ಈದ್ ಮಿಲಾದ್ ಸೌಹಾರ್ದ ಆಚರಣೆ ಅಗತ್ಯ: ಡಿಸಿ । ಕಾನೂನು ಉಲ್ಲಂಘಿಸಿದರೆ ಕ್ರಮ: ಎಸ್‌ಪಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಉಭಯ ಧರ್ಮೀಯರು ಶಾಂತಿ, ಸೌಹಾರ್ದತೆಯಿಂದ ಆಚರಿಸಿ, ಇತರರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಗಣೇಶ ಚತುರ್ಥಿ- ಈದ್‌ ಮಿಲಾದ್ ಹಬ್ಬಗಳ ಹಿನ್ನೆಲೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಗರೀಕ ಸೌಹಾರ್ದತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸಾಂಪ್ರಾದಾಯಿಕ ಮೆರವಣಿಗೆಗೆ ಗಣೇಶ ಪ್ರತಿಷ್ಠಾಪಿಸುವವರು ಗಮನ ಹರಿಸಬೇಕು ಎಂದರು.

ಹಿಂದು-ಮುಸ್ಲಿಂ ಧರ್ಮೀಯರು ಕೋಮು ಗಲಭೆ, ಶಾಂತಿ ಕದಡುವ ಕೆಲಸ ಮಾಡದಂತೆ ಮಾದರಿ ಹಬ್ಬ ಆಚರಿಸಬೇಕು. ಮುಖಂಡರು ಗಮನ ಹರಿಸಬೇಕು. ಅನ್ಯ ಜಾತಿ, ಧರ್ಮಗಳ ಭಾವನೆ ಕೆರಳಿಸುವಂತೆ, ಶಾಂತಿ ಭಾವನೆ ಕದಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ, ಆಡಿಯೋ, ಪೋಸ್ಟ್‌ಗಳನ್ನು ಹಂಚಿಕೊಳ್ಳುವಂತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಅಂತಹ 28 ಜನರನ್ನು ಗಡೀಪಾರು ಮಾಡಲಾಗಿದೆ. ಇಂತಹ ಕಿಡಿಗೇಡಿಗಳ ಬಗ್ಗೆ ಮಾಹಿತಿ ಇದ್ದರೆ, ಮದ್ಯ, ಮಾದಕ ವಸ್ತುಗಳ ಬಳಕೆ, ಮಾರಾಟ, ಸಾಗಾಟ ಮಾಡುವವರ ಬಗ್ಗೆ ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ಆಚರಣೆ ಹಾಗೂ ವಿಸರ್ಜನೆ ವೇಳೆ ಪೊಲೀಸ್ ಇಲಾಖೆ ಹಗಲಿರುಳು ಬಂದೋಬಸ್ತ್‌ಗೆ ತೊಡಗುತ್ತದೆ. ಈ ಸಲ ಹಬ್ಬಗಳ ಆಚರಣೆ, ವಿಸರ್ಜನೆಗೆ ಡಿಜೆಗಳಿಗೆ ಅನುಮಿತಿ ನಿಷೇಧಿಸಲಾಗಿದೆ. ಇದರಿಂದ ಶಬ್ಧ ಮಾಲಿನ್ಯ ಉಂಟಾಗುತ್ತದೆ. ಅಲ್ಲದೇ, ಅನೇಕ ಘರ್ಷಣೆಗಳಿಗೂ ಎಡೆ ಮಾಡಿಕೊಡುತ್ತದೆ. ಹಾಗಾಗಿ ದೇಶದ ಕಲೆ, ಸಂಸ್ಕೃತಿ, ಸಾಂಸ್ಕೃತಿಕತೆಗೆ ಹೆಸರಾದ ಸ್ಥಳೀಯ ಜಾನಪದ ಪ್ರಕಾರಗಳು, ಡೋಲು ಮತ್ತಿತರೆ ಕಲಾ ತಂಡಗಳನ್ನು ಬಳಸಿಕೊಂಡರೆ, ಕಲಾವಿದರ ಹೊಟ್ಟೆಯೂ ತುಂಬುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಅಹಿತಕರ ಘಟನೆ ನಡೆಯದಂತೆ ಜಿಲ್ಲಾ, ತಾಲೂಕು, ಸರ್ಕಲ್ ಮಟ್ಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಣೇಶ ಪ್ರತಿಷ್ಟಾಪನೆ, ಪೆಂಡಾಲ್‌ ಹಾಕಲು, ಫ್ಲೆಕ್ಸ್‌, ಬಂಟಿಂಗ್ಸ್ ಅಳವಡಿಸಲು ಅನುಮತಿ ಕಡ್ಡಾಯ. ಪೆಂಡಾಲ್‍ನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು, ಏನೇ ಸಮಸ್ಯೆ ಉಂಟಾದರೂ ಆಯೋಜಕರೇ ನೇರ ಹೊಣೆಗಾರರಾಗಿಸುತ್ತೇವೆ. ಮೆರವಣಿಗೆ ವೇಳೆ ಸಮಸ್ಯೆಗಳಾದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸಿಸಿ ಟಿವಿ ಅಳವಡಿಸಲಾಗಿದೆ. ಹಬ್ಬದ ಸಂಭ್ರಮಾಚರಣೆ ವೇಳೆ ಶಾಂತಿ ಕದಡುವ ದೃಶ್ಯ ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ಆಯೋಜಿಸುವ, ಆಚರಣೆ ಮಾಡುವ ಪ್ರತಿಯೊಬ್ಬರೂ ಕಾಲಾವಧಿಗೂ ಮುಂಚಿತವಾಗಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮುಂಬೈ, ಪುಣೆ ಮಾದರಿಯಲ್ಲಿ ಶಾಂತಿ, ಶಿಸ್ತಿನೊಂದಿಗೆ ಆಚರಣೆ ಅಗತ್ಯ. ಶಾಲೆ, ಅಂಗನವಾಡಿ, ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಆಚರಿಸಬಾರದು ಎಂದರು.

ಎಎಸ್‌ಪಿ ಪರಮೇಶ್ವರ ಹೆಗಡೆ, ಅಪರ ಡಿಸಿ ಶೀಲವಂತ ಶಿವಕುಮಾರ, ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್‌, ಎಸಿ ಸಂತೋಷ ಪಾಟೀಲ, ಪಾಲಿಕೆ ಆಯುಕ್ತ ರೇಣುಕಾ, ಡಿವೈಎಸ್ಪಿಗಳಾದ ಬಿ.ಶರಣ ಬಸವೇಶ್ವರ, ಬಿ.ಎಸ್. ಬಸವರಾಜ, ಪಿ.ಬಿ.ಪ್ರಕಾಶ, ಹಿಂದು-ಮುಸ್ಲಿಂ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

- - -

(ಕೋಟ್ಸ್‌) ಪರಿಸರ ಮಾಲಿನ್ಯ ತಡೆಗಟ್ಟಲು ಪರಿಸರಸ್ನೇಹಿ ಗಣೇಶಮೂರ್ತಿ ಪ್ರತಿಷ್ಟಾಪಿಸಿ ಸಹಕರಿಸಬೇಕು. ಹಬ್ಬದ ಪ್ರಯುಕ್ತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಲು ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಮಾರ್ಗ ಬದಲಾವಣೆ ಮಾಡದೇ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕು. ವಿದ್ಯುತ್ ಅವಘಡ ಸಂಭವಿಸದಂತೆ ಅತ್ಯಂತ ಜಾಗೃತೆ ವಹಿಸಬೇಕು.

- ಜಿ.ಎಂ. ಗಂಗಾಧರ ಸ್ವಾಮಿ, ಡಿಸಿ

- - -

-(ಫೋಟೋ ಇದೆ)