ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ರಾತ್ರಿ 10 ಗಂಟೆ ಬಳಿಕ ಡಿಜೆ ಸದ್ದಿಗೆ ಅನುಮತಿ ಕಷ್ಟಸಾಧ್ಯ. ಕಾನೂನು ಸಡಿಲಗೊಳಿಸುವ ಸ್ಥಾನದಲ್ಲಿ ತಾನಿಲ್ಲ ಎಂದು ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ರಾತ್ರಿ 10 ಗಂಟೆ ಬಳಿಕ ಡಿಜೆ ಸದ್ದಿಗೆ ಅನುಮತಿ ಕಷ್ಟಸಾಧ್ಯ. ಕಾನೂನು ಸಡಿಲಗೊಳಿಸುವ ಸ್ಥಾನದಲ್ಲಿ ತಾನಿಲ್ಲ ಎಂದು ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮಡಿಕೇರಿ, ಗೋಣಿಕೊಪ್ಪಲು ದಸರೆ ಹಾಗೂ ಕಾವೇರಿ ಪವಿತ್ರ ತೀರ್ಥೋದ್ಭವ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ನಿಯಮಗಳನ್ನು ಸಡಿಲಿಸಿ ಎಂಬ ಬೇಡಿಕೆ ತಪ್ಪಲ್ಲ. ಆದರೆ, ಒಮ್ಮೆ ನಿಯಮಗಳನ್ನು ಸಡಿಲಿಸಿದರೆ ಮುಂದೆ ದಸರೆಯ ಸ್ವರೂಪವೇ ಬದಲಾಗಬಹುದು. ಹಾಗಾಗಿ, ನಿಯಮ ಮೀರದಂತೆ ಇತಿಮಿತಿಯಲ್ಲೇ ಉತ್ಸವ ಆಚರಿಸಿ ಎಂದರು.ಈ ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಎಲ್ಲರೂ ತಲೆಬಾಗಲೆಬೇಕು. ಅವುಗಳ ಮಿತಿಯಲ್ಲಿ ಹಬ್ಬ ಆಚರಿಸಿ ಎಂದು ಹೇಳಿದರು.ರಾಜ್ಯದ ಎಲ್ಲೆಡೆ ಭೀಕರವಾದ ಬರ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಮತ್ತು ಮೈಸೂರಿನಲ್ಲಿ ಅದ್ಧೂರಿಯಾಗಿ ದಸರೆ ಆಚರಿಸಲಾಗುತ್ತಿದೆ. ಉತ್ಸವದ ಸಂಭ್ರಮಕ್ಕೆ ಅಡ್ಡಿ ಮಾಡುವುದಿಲ್ಲ. ಉತ್ಸವ ಸಾಂಗವಾಗಿ ನೆರವೇರಲು ಅಗತ್ಯ ಇರುವ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.ಕರಗೋತ್ಸವದ ಆರಂಭದ ದಿನ ನಾನು ಉತ್ಸವದಲ್ಲಿ ಭಾಗವಹಿಸುವೆ. ಆದರೆ, ದಶಮಂಟಪಗಳ ಶೋಭಾಯಾತ್ರೆಯ ಮರುದಿನವೇ ದೆಹಲಿಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ಇರುವುದರಿಂದ ಅಲ್ಲಿಗೆ ಹೋಗಲೇಬೇಕಿದೆ. ಹಾಗಾಗಿ, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಯಾರೂ ಸಹ ಅನ್ಯತಾ ಭಾವಿಸಬೇಡಿ ಎಂದರು.ಕಾವೇರಿ ಪವಿತ್ರ ತೀರ್ಥೋದ್ಭವಕ್ಕೂ ಸರ್ಕಾರ ಅನುದಾನ ನೀಡಿದೆ. ಅಧಿಕಾರಿಗಳು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದರು.ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಸರ್ಕಾರ ಈಗಾಗಲೇ ದಸರೆಗೆ ₹ 2 ಕೋಟಿ ಅನುದಾನ ನೀಡಿದೆ. ಇನ್ನಷ್ಟು ಅನುದಾನ ಕೊಡಬೇಕು ಎಂದು ಮನವಿ ಮಾಡಿದರು.ಕಳೆದ ವರ್ಷ ಧ್ವನಿವರ್ಧಕದ ಮೇಲೆ ನಿಯಂತ್ರಣ ಹೇರಿದ್ದರಿಂದ ಜನರು ಕಡಿಮೆ ಬಂದಿದ್ದರು. ಆದಾಗ್ಯೂ ಸಮಿತಿ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಲಾಯಿತು. ಈ ಬಾರಿ ಹಾಗೆ ಆಗಬಾರದು ಎಂದು ಹೇಳಿದರು.ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ‘ರಸ್ತೆ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ರಾತ್ರಿ ವೇಳೆಯೂ ಮಾಡಬೇಕು’ ಎಂದು ಹೇಳಿದರು.‘ರಾತ್ರಿ 10 ಗಂಟೆಗೆ ಧ್ವನಿವರ್ಧಕ ನಿಲ್ಲಿಸಿ ಎಂದು ಪೊಲೀಸರು ತಕರಾರು ಮಾಡುತ್ತಾರೆ. ದಯವಿಟ್ಟು ಕಾರ್ಯಕ್ರಮ ಪೂರ್ಣಗೊಳಿಸಲು ಬಿಡಿ. ನಾವೇನೂ ದೊಡ್ಡ ಮಟ್ಟದಲ್ಲಿ ಶಬ್ಧ ಮಾಡುವುದಿಲ್ಲ’ ಎಂದರು.
ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಡಿಕೇರಿ ದಸರಾ ಉತ್ಸವ ಕುರಿತ ಮಾಹಿತಿ ನೀಡಿದರೆ, ಗೋಣಿಕೊಪ್ಪಲು ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಗೋಣಿಕೊಪ್ಪಲು ದಸರಾ ಕುರಿತು ಮಾಹಿತಿ ನೀಡಿದರು.ಮಡಿಕೇರಿ ದಸರಾ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್ ಮಾತನಾಡಿದರು.ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಡಿಸಿಎಫ್ ಅಭಿಷೇಕ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು.
...............ನೀರು ಕಡಿಮೆ ಬಳಸಿ ಸಹಕರಿಸಲು ಮನವಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ನರೇಂದ್ರಸ್ವಾಮಿ, ಎಲ್ಲರೂ ನೀರನ್ನು ಕಡಿಮೆ ಬಳಸುವ ಮೂಲಕ ಸಹಕಾರ ಕೊಡಿ ಎಂದು ಮನವಿ ಮಾಡಿದರುಈ ಬಾರಿ ಹಿಂದೆಂದೂ ಕೇಳರಿಯದಂತಹ ಸೂಪರ್ ಎಲ್‌ನಿನೊ ಇದೆ. ಮುಂದಿನ 2 ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಾಗಿದೆ ಎಂದು ಹೇಳಿದರು.ದೆಹಲಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ತಜ್ಞರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಅಂತರ್ಜಲ ಕುಸಿದು ಯಾರೂ ಸಹ ನಿಯಂತ್ರಣ ಮಾಡಲಾಗದಂತಹ ಸ್ವರೂಪದಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗಲಿವೆ ಎಂದರು. ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಿಂದ ವಾಪಸ್ ತೆರಳಿದ ಬಳಿಕ ಮುಖ್ಯಮಂತ್ರಿಯವರೊಂದಿಗೆ ಈ ಕುರಿತು ಚರ್ಚಿಸಿ ವಿವರವಾದ ಮಾಹಿತಿ ನೀಡುವೆ ಎಂದರು.ಕಳ್ಳಮಾರ್ಗದಲ್ಲಿ ಅಧಿಕಾರಕ್ಕೆ ಬರಬೇಕೆನ್ನುವ ಉದ್ದೇಶದಿಂದಲೆ ಫಾರಂ–7 ಅನ್ನು ಸಲ್ಲಿಸಲಾಗುತ್ತಿದೆ. ಒಂದು ಕಚೇರಿಯಲ್ಲಿ ಸಾವಿರಾರು ಫಾರಂ–7 ಅನ್ನು ಮುದ್ರಿಸಲಾಗಿದೆ. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಕೊಂದು ಹಾಕಲಾಗುತ್ತಿದೆ ಎಂಬುದು ಈಗ ಸಾಬೀತಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.