ಸಾರಾಂಶ
ಚಳ್ಳಕೆರೆ: ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಸಹಯೋಗದೊಂದಿಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಹಿಂದೂಪರಿಷತ್ ಗಣೇಶೋತ್ಸವ ವಿಸರ್ಜನಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ೧೧ ಗಂಟೆಗೆ ನಡೆಯಿತು.
ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಶ್ರೀಗಣೇಶನಿಗೆ ಪೂಜೆ ಸಲ್ಲಿಸಿ ವಿಸರ್ಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯ ಭಕ್ತರ ಜಯಕಾರದೊಂದಿಗೆ ಮೆರವಣಿಗೆ ಆರಂಭವಾಯಿತು.ಮೆರವಣಿಗೆ ಉದ್ದಕ್ಕೂ ಮಹಿಳಾ ಸಂಘಟನೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಭಕ್ತರು ಜೈಘೋಷಹಾಕುತ್ತಾ ಮುನ್ನಡೆದರು. ವಿಶೇಷವಾಗಿ ವಾಲ್ಮೀಕಿ ವೃತ್ತದಲ್ಲಿ ಮಹಿಳೆಯರು ನಡೆಸಿದ ನೃತ್ಯ ಕಾರ್ಯಕ್ರಮ ಜನರ ಮನಸೂರೆಗೊಂಡಿತು.
ಡಿಜೆಗಾಗಿ ಪ್ರತಿಭಟನೆ:ವಾಲ್ಮೀಕಿ ವೃತ್ತದಿಂದ ಶ್ರೀಗಣೇಶನ ಮೆರವಣಿಗೆ ಇಲ್ಲಿನ ಬೆಸ್ಕಾಂ ಕಚೇರಿ ದಾಟಿ, ಬಿಎಂ ಸರ್ಕಾರಿ ಪ್ರೌಢಶಾಲಾ ಮುಂಭಾಗಕ್ಕೆ ಮಧ್ಯಾಹ್ನ ೩ ಗಂಟೆಗೆ ಆಗಮಿಸಿದ್ದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಯುವಕರು ಬೇರೆ ಕಡೆಯಲ್ಲಿ ಗಣೇಶನ ವಿಸರ್ಜನೆಗೆ ಪೊಲೀಸ್ ಇಲಾಖೆ ಡಿಜೆ ಉಪಯೋಗಕ್ಕೆ ಅವಕಾಶ ನೀಡಿದೆ. ಆದರೆ ನಮಗೆ ನೀಡಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸಿದರಲ್ಲದೆ, ಗಣೇಶನ ಮುಂಭಾಗದಲ್ಲಿ ಕುಳಿತು ಪೊಲೀಸ್ ಇಲಾಖೆ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಹಾಗೂ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಭಕ್ತರ ಮನವಲಿಸಿದರೂ ಪ್ರಯೋಜನವಾಗಲಿಲ್ಲ. ರಾತ್ರಿ ೮.೧೫ಕ್ಕೆ ಮೆರವಣಿಗೆಯಲ್ಲಿದ್ದ ಭಕ್ತರು ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಡಿಜೆಗೆ ಅನುಮತಿ ನೀಡಬಾರದು ಎಂಬ ವಾದವನ್ನು ಮಂಡಿಸಿ ಗಣೇಶನ ಮೂರ್ತಿಯ ಮೆರವಣಿಗೆ ಪ್ರಾರಂಭಿಸಿದರು. ಒಟ್ಟು ೫ ಗಂಟೆಗಳ ಕಾಲ ಗಣೇಶನ ಮೆರವಣಿಗೆ ನಡೆಯದೆ ನಿಂತಜಾಗದಲ್ಲೇ ನಿಂತಿತ್ತು.ನಗರದ ನೆಹರೂ ವೃತ್ತಕ್ಕೆ ಆಗಮಿಸಿದ ಗಣೇಶನನ್ನು ನೆರೆದಿದ್ದ ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ಸ್ವಾಗತಮಾಡಿದರು. ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ನೆಹರೂ ವೃತ್ತಕ್ಕೆ ಆಗಮಿಸಿ ಬಳ್ಳಾರಿ ರಸ್ತೆಯ ಮೂಲಕ ವಿಸರ್ಜನಾ ಸ್ಥಳವಾದ ನಾಯಕನಹಟ್ಟಿ ರಸ್ತೆಯ ಗೌಡ್ರಕಪಿಲೆ ಕಡೆ ತೆರಳಿತು. ತಡ ರಾತ್ರಿಯಾದರೂ ಮೆರವಣಿಗೆ ಮುಂದುವರೆದಿತ್ತು.
ವಿಶ್ವಹಿಂದೂಪರಿಷತ್ ಪ್ರಾಂತಸಂಚಾಲಕ ಡಾ.ಡಿ.ಎನ್.ಮಂಜುನಾಥ, ವಿಶ್ವ ಹಿಂದೂಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ.ಯತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಸೋಮಶೇಖರ ಮಂಡಿಮಠ, ಜೆ.ಪಿ.ಜಯಪಾಲಯ್ಯ, ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಉಪಾಧ್ಯಕ್ಷ ರಾಘವೇಂದ್ರರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ, ಭಜರಂಗದಳ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಕೋಶಾಧ್ಯಕ್ಷೆ ಲಕ್ಷ್ಮಿಶ್ರೀವತ್ಸ, ಸಹ ಕೋಶಾಧ್ಯಕ್ಷ ಟಿ.ಕೆ.ನಾಗೇಶ್‌ಬಾಬು, ಶೋಭಾಯಾತ್ರಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ, ಉಪಾಧ್ಯಕ್ಷ ನವೀನ್‌ಜೈನ್, ಪ್ರಧಾನ ಕಾರ್ಯದರ್ಶಿ ಬೇಕರಿಮಂಜುನಾಥ, ಕಾರ್ಯದರ್ಶಿ ಶ್ರೀನಿವಾಸ್, ಸಹಕಾರ್ಯದರ್ಶಿ ಮೋಹನ್‌ಕುಮಾರ್, ಡಿ.ಜೆ.ಪ್ರಕಾಶ್, ಎಚ್.ಉಮೇಶ್, ಉಪ್ಪಾರಹಟ್ಟಿಈರಣ್ಣ, ಮಹಂತಣ್ಣ, ಮಧು ಮತಿಶಿವಕುಮಾರ್, ಶುಭಸೋಮಶೇಖರ್, ಶುಭಸುರೇಶ್ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ನೀರು ಹಾಗೂ ಮಜ್ಜಿಗೆ ವಿತರಣೆ:
ಮೆರವಣಿಗೆ ಸಾಗುವ ಹಾದಿಯಲ್ಲಿ ಚಿತ್ರದುರ್ಗ ರಸ್ತೆಯಲ್ಲಿ ಎಸ್.ಆರ್.ಪ್ರೆಂಡ್ಸ್ ಹಾಗೂ ಮುಸ್ಲಿಂ ಸಂಘಟನೆಯ ಮುಖಂಡರು ನೀರು ಹಾಗೂ ಮಜ್ಜಿಗೆ ವಿತರಿಸಿದರು. ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ವೀರಶೈವ ಸಮಾಜದ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪುರೋಹಿತರಾದ ಪ್ರದೀಪ್‌ಶರ್ಮ, ಪ್ರವೀಣ್‌ಶರ್ಮ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.