ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ರೈತರ ಬಡಿದಾಟಕ್ಕೆ ಬೈರಮಂಗಲ ಗ್ರಾಮದಲ್ಲಿ ವೇದಿಕೆ ಅಣಿಯಾಗಿದೆ.
ಈ ಟೌನ್ ಶಿಪ್ ಯೋಜನೆಗೆ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಇಲ್ಲಿನ ಭೂ ಮಾಲೀಕರಾದ ರೈತರು ಮೂರು ಗುಂಪುಗಳಾಗಿ ಹೋಳಾಗಿದ್ದಾರೆ. ಇದರಲ್ಲಿ ಒಂದು ಗುಂಪು ಕೇಂದ್ರ ಸಚಿವ ಕುಮಾರಸ್ವಾಮಿ, ಇನ್ನೊಂದು ಗುಂಪು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿದ್ದರೆ, ಮತ್ತೊಂದು ರೈತರ ಗುಂಪು ತಟಸ್ಥವಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.ಒಂದು ರೈತರ ಗುಂಪು ಟೌನ್ ಶಿಪ್ ಯೋಜನೆ ವಿರುದ್ಧವಾಗಿ 475 ದಿನಗಳಿಂದ ನಿರಂತರವಾಗಿ ಚಳವಳಿ ನಡೆಸುತ್ತಿದೆ. ಈ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲವಾಗಿ ನಿಂತು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇನ್ನು ಬಾಹ್ಯ ಬೆಂಬಲ ನೀಡಿರುವ ಬಿಜೆಪಿಯಿಂದ ಹೇಳಿಕೊಳ್ಳುವಂತಹ ಪ್ರತಿರೋಧ ಕಂಡು ಬರುತ್ತಿಲ್ಲ.
2ನೇ ಬಾರಿ ಎಚ್ ಡಿಕೆ ಆಗಮನ:ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.
ಒಂದು ಬಾರಿ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ 8 ಗ್ರಾಮಗಳಲ್ಲಿ ಪಾದಯಾತ್ರೆ ಕೂಡ ನಡೆಸಿದ್ದಾರೆ. ಒಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಿಂದ ರೈತರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಕುಮಾರಸ್ವಾಮಿಯವರು ಜನವರಿ 25ರಂದು ಚಳವಳಿಯಲ್ಲಿ ಭಾಗವಹಿಸಿದ್ದರು.
ಟೌನ್ ಶಿಪ್ ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಜೂನ್ 26ರಂದು ವಿಧಾನಸೌಧದದಲ್ಲಿ ಚರ್ಚೆಗೆ ಆಹ್ವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಧಾನಸೌಧದಲ್ಲಿ ಬೇಡ, ಬೈರಮಂಗಲ ವೃತ್ತದಲ್ಲಿ ರೈತರ ಮಧ್ಯದಲ್ಲಿಯೇ ಚರ್ಚೆ ನಡೆಯಲೆಂದು ಪಂಥಾಹ್ವಾನ ನೀಡಿದ್ದಾರೆ.
ಅದರಂತೆ ಎರಡನೇ ಬಾರಿಗೆ ಕುಮಾರಸ್ವಾಮಿಯವರು ಜೂನ್ 27ರಂದು ಬೆಳಗ್ಗೆ 11 ಗಂಟೆಗೆ ಬೈರಮಂಗಲ ವೃತ್ತಕ್ಕೆ ಭೇಟಿ ನೀಡಿ ಟೌನ್ ಶಿಪ್ ಯೋಜನೆ ಭೂಸ್ವಾಧೀನ ವಿಚಾರವಾಗಿ ರೈತರ ಅಹವಾಲು ಆಲಿಸುವ ಕಾರ್ಯಕ್ರಮ ನಿಗದಿಯಾಗಿದೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ.ಆದರೆ, ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ಸಿದ್ಧರಾಗಿರುವ ಅಂದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿರುವ ಮತ್ತೊಂದು ಗುಂಪಿನ ರೈತರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಒಂದಷ್ಟು ಪ್ರಶ್ನೆಗಳನ್ನು ಕೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬೈರಮಂಗಲ ಗ್ರಾಮದಲ್ಲಿ ಟೌನ್ ಶಿಪ್ ಪರ ಮತ್ತು ವಿರೋಧ ಇರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶಿಸಲು ತಯಾರಿ ನಡೆಸಿದ್ದು, ಎರಡೂ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದು ಬಿಗುವಿನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಕ್ರಮ ವಹಿಸಲಾಗಿದೆ.(ಡಿಕೆಶಿ ಮತ್ತು ಎಚ್ಡಿಕೆ ಮಗ್‌ಶಾಟ್ )
ಬಾಕ್ಸ್.........ಬೈರಮಂಗಲದಲ್ಲಿ ನಿಷೇಧಾಜ್ಞೆ ಹೇರುವ ಸಾಧ್ಯತೆ?
- ಜಿಲ್ಲಾಡಳಿತ ಮೌನಕ್ಕೆ ಜನರಲ್ಲಿ ಆಕ್ರೋಶ- ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಹೊಣೆ ಯಾರು ?
ರಾಮನಗರ:ಬಿಡದಿ ಟೌನ್‌ಶಿಪ್ ಯೋಜನೆ ಪರ ಮತ್ತು ವಿರೋಧದ ಚಳವಳಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಇದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೈರಮಂಗಲ ವೃತ್ತ ಹಾಗೂ ವೃತ್ತದ ಕೂಗಳತೆ ದೂರದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗುತ್ತಿದ್ದಾರೆ. ರೈತರ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸುವ ಸನ್ನಿವೇಶವೂ ಸೃಷ್ಟಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆಗಾರರಾಗುತ್ತಾರೆ.
ಈ ಚಳವಳಿಗಳ ಕಾರಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಮಾಹಿತಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ್ದರು. ಯೋಜನೆ ಪರವಾಗಿರುವ ರೈತರೊಂದಿಗೆ ಚರ್ಚೆ ನಡೆಸಿ ನಾಳೆಯ ಹೋರಾಟ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು ಪ್ರಯೋಜನ ಆಗಲಿಲ್ಲ. ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಪೊಲೀಸ್ ಇಲಾಖೆ ವರದಿ ಅಧರಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಜಿಲ್ಲಾಡಳಿತ ಬೈರಮಂಗಲ ಗ್ರಾಮದಲ್ಲಿ ನಿಷೇಧಾಜ್ಞೆ ಹೇರುವ ಸಾಧ್ಯತೆಗಳಿವೆ.
