ಡಿಕೆಶಿ ಸಿಎಂ ಆಗಲೆಂದು ಘೋಷಣೆ

| Published : Apr 30 2024, 02:06 AM IST

ಸಾರಾಂಶ

ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳ ಬಳಗದ ವತಿಯಿಂದ ಹತ್ತಾರು ಯುವಕರು ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಟಿಎಪಿಸಿಎಮ್ಎಸ್ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ ಹಾಗೂ ಹನಮಸಾಗರದ ವತಿಯಿಂದ ನಡೆದ ಪ್ರಜಾಧ್ವನಿ ಲೋಕಸಭಾ ಚುನಾವಣೆಯ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳ ಬಳಗದ ವತಿಯಿಂದ ಹತ್ತಾರು ಯುವಕರು ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಘೋಷಣೆ ಕೂಗಿದರು.

29ಕೆಎಸಟಿ2: ಕುಷ್ಟಗಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಿಮಾನಿಗಳು ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.

ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಗುನುಗಿದ ಡಿಕೆಶಿ:

ಭಾಗ್ಯದ ಲಕ್ಷ್ಮೀ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುವ ಹಾಡನ್ನು ಡಿಸಿಎಂ ಡಿ.ಕೆ. ಶಿವಕುಮಾರ ವೇದಿಕೆಯಲ್ಲಿಯೇ ಹಾಡಿದರು.

ಕುಷ್ಟಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸುವ ವೇಳೆಯಲ್ಲಿ ಈ ಹಾಡಿನ ಎರಡು ಲೈನ್ ಹಾಡಿದರು.

ನಿಮ್ಮ ಮನೆಯ ಬಾಗಲಿಗೆ ಭಾಗ್ಯಲಕ್ಷ್ಮೀ ಬಂದಿದ್ದಾಳೆ, ಬಾಗಿಲು, ಕಿಟಕಿ ತೆಗೆದು ಒಳಗೆ ಕರೆದುಕೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯ ಕೊಟ್ಟಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ ಕೇಂದ್ರದ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಭಾಗ್ಯದ ಲಕ್ಷ್ಮೀಯನ್ನು ಮನೆಯೊಳಗೆ ಕರೆದುಕೊಳ್ಳಿ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಕೊಡುವ 24 ಸಾವಿರ ರುಪಾಯಿ ಜೊತೆಗೆ ಮಹಾಲಲಕ್ಷ್ಮೀ ಎನ್ನುವ ಯೋಜನೆಯ ಮೂಲಕ 1 ಲಕ್ಷ ರುಪಾಯಿ ಮಹಿಳೆಯರಿಗೆ ನೀಡುತ್ತಿದ್ದಾರೆ ಎಂದರು. ಅಷ್ಟೇ ಅಲ್ಲ, ₹25 ಲಕ್ಷ ರುಪಾಯಿ ಇನ್ಸೂರೆನ್ಸ್ ಮಾಡಿಸಲಾಗುತ್ತದೆ ಎಂದರು. ಕೇಂದ್ರದ ಘೋಷಣೆಯಾಗಿರುವ ಗ್ಯಾರಂಟಿಗಳನ್ನು ಎಳೆ ಎಳೆಯಾಗಿ ಬಿಡಿಸಿ, ಇದು ಭಾಗ್ಯವಲ್ಲವೇ ಎಂದು ಪ್ರಶ್ನೆ ಮಾಡಿದರು. ಹೀಗಾಗಿ, ಭಾಗ್ಯದ ಲಕ್ಷ್ಮೀ ಮನೆಗೆ ಬಂದಾಗ ಬಾಗಿಲು, ಕಿಟಕಿ ತೆರೆದು ಒಳಗೆ ಕರೆದುಕೊಳ್ಳಿ ಎಂದರು.

ಕಾಂಗ್ರೆಸ್ ಸೂಜಿ ಇದ್ದಂತೆ ಹೊಲಿಯುವ ಕೆಲಸ ಮಾಡುತ್ತದೆ. ಬಿಜೆಪಿ ಕತ್ತರಿ ಇದ್ದಂಗೆ ಕತ್ತರಿಸುವ ಕೆಲಸ ಮಾಡುತ್ತದೆ. ಎರಡು ಕಬ್ಬಿಣದಿಂದಲೇ ಮಾಡಿರುತ್ತಾರೆ. ಆದರೆ, ಮಾಡುವ ಕೆಲಸ ಮಾತ್ರ ಬೇರೆ ಬೇರೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಇನ್ನು 9 ವರ್ಷ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದರು.

ಮಿಸ್ಟರ್ ಯಡಿಯೂರಪ್ಪ ಮಗಾ, ಮಿಸ್ಟರ್ ವಿಜಯೇಂದ್ರ ಅವರೇ ಯಾರಿಂದಲೂ ಗ್ಯಾರಂಟಿ ಯೋಜನೆ ನಿಲ್ಲಿಸೋಕೆ ಆಗಲ್ಲ ಮತ್ತು ನಮ್ಮ ಹಣೆಬರಹದಲ್ಲಿಯೂ ಬರೆದಿಲ್ಲ ಎಂದರು.

ಯಾರು ದಾರಿ ತಪ್ಪುತ್ತಿದ್ದಾರೆ:

ಕುಮಾರಸ್ವಾಮಿ ಅವರೇ ಯಾರು ಈಗ ದಾರಿ ತಪ್ಪುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ನೆರೆದಿದ್ದವರೆಲ್ಲ ಪ್ರಜ್ವಲ್ ಎಂದು ಕೂಗಿದರು. ಆಗ ನಾನು ಯಾರು, ಏನು ಅಂತಾ ಹೇಳಲ್ಲ, ನಾನು ಆ ಕುರಿತು ಮಾತನಾಡಿದರೆ ನನ್ನ ಮೈಮೇಲೆ ಬರುತ್ತದೆ ಎಂದರು. ಅವರನ್ನು ಬಿಜೆಪಿಯವರು ಇಟ್ಕೋಳ್ಳಲಿ ಎಂದರು.