ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ಸಕಾಲ ಹಾಗೂ ಪೋಡಿ ಅರ್ಜಿ ವಿಲೇವಾರಿಯಲ್ಲಿ ದ.ಕ. ರಾಜ್ಯಕ್ಕೇ ಪ್ರಥಮ!

| N/A | Published : Apr 08 2025, 01:48 AM IST / Updated: Apr 08 2025, 05:56 AM IST

ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ಸಕಾಲ ಹಾಗೂ ಪೋಡಿ ಅರ್ಜಿ ವಿಲೇವಾರಿಯಲ್ಲಿ ದ.ಕ. ರಾಜ್ಯಕ್ಕೇ ಪ್ರಥಮ!
Share this Article
  • FB
  • TW
  • Linkdin
  • Email

ಸಾರಾಂಶ

ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರಗಳ ಸೇವೆಗಳನ್ನು ತ್ವರಿತವಾಗಿ ನೀಡುವಲ್ಲಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಈಗ ಸಕಾಲ ಯೋಜನೆ ಹಾಗೂ ಪೋಡಿ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನದಲ್ಲಿದೆ.

 ಮಂಗಳೂರು : ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರಗಳ ಸೇವೆಗಳನ್ನು ತ್ವರಿತವಾಗಿ ನೀಡುವಲ್ಲಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಈಗ ಸಕಾಲ ಯೋಜನೆ ಹಾಗೂ ಪೋಡಿ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನದಲ್ಲಿದೆ. ಜಿಲ್ಲಾಡಳಿತದ ಕಾರ್ಯದಕ್ಷತೆಯ ಕೆಲಸದಿಂದಾಗಿ ದ.ಕ. ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಸಕಾಲ ಅರ್ಜಿ ವಿಲೇವಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಹಾಗೂ ಪೋಡಿ ಅರ್ಜಿ ವಿಲೇವಾರಿಯಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದೆ. ಈ ಮೂಲಕ ಕಂದಾಯ ಕೆಲಸ ಕಾರ್ಯಗಳಲ್ಲಿ ದ.ಕ. ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿ ಎಂದು ಬೊಟ್ಟು ಮಾಡುವಂತಾಗಿದೆ.

ಸಕಾಲ ಸಾಧನೆ:

ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ವರ್ಷದ ಅಂತ್ಯಕ್ಕೆ ಅಂದರೆ ಮಾರ್ಚ್‌ ತಿಂಗಳ ವೇಳೆಗೆ ಸಕಾಲದಲ್ಲಿ ಅರ್ಜಿ ವಿಲೇವಾರಿಯಲ್ಲಿ ದ.ಕ. ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದ ಸಾಧನೆ ಮಾಡಿದೆ.

ಮಾರ್ಚ್‌ನಲ್ಲಿ 1,08,959 ಅರ್ಜಿ ಸಲ್ಲಿಕೆಯಾಗಿದ್ದು, 1,09,562 ಅರ್ಜಿಗಳನ್ನು(ಬಾಕಿ ಅರ್ಜಿ ಸೇರಿ) ವಿಲೇವಾರಿ ಮಾಡಲಾಗಿದೆ. 3,583 ಅರ್ಜಿಗಳು ತಿರಸ್ಕೃತಗೊಂಡಿವೆ. 3,361 ಅರ್ಜಿಗಳು ತುಸು ವಿಳಂಬವಾಗಿ ವಿಲೇವಾರಿಯಾದರೆ, 1,06,201 ಅರ್ಜಿಗಳು ತ್ವರಿತವಾಗಿ ವಿಲೇವಾರಿಗೊಂಡಿವೆ. ಅಂದರೆ ಶೇ. 96.93ರಷ್ಟು ಅರ್ಜಿಗಳು ತ್ವರಿತ ವಿಲೇವಾರಿ ಕಂಡಿವೆ. 321 ಅರ್ಜಿಗಳು ಅವಧಿ ಮೀರಿ ಬಾಕಿಯಾಗಿದ್ದವು. ಕಂದಾಯ ಇಲಾಖೆಯ ಅರ್ಜಿ ವಿಲೇವಾರಿಯ 32 ಜಿಲ್ಲೆಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ದ.ಕ.ಜಿಲ್ಲೆಗೆ ಮೊದಲ ಸ್ಥಾನ, ಉತ್ತರ ಕನ್ನಡ ದ್ವಿತೀಯ ಹಾಗೂ ಹಾಸನ ತೃತೀಯ ಸ್ಥಾನ ಪಡೆದಿದೆ.

ಪೋಡಿ ಕಾರ್ಯದಲ್ಲೂ ದ.ಕ. ಅಗ್ರ:

ಪೋಡಿ(1ರಿಂದ 5 ಪ್ರಕರಣ) ಕಾರ್ಯಕ್ರಮದಲ್ಲೂ ದ.ಕ. ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಏಪ್ರಿಲ್‌ 6ರ ವರೆಗಿನ ಅಂಕಿಅಂಶ ಪ್ರಕಾರ ಪೋಡಿ(ಜಾಗದ ಅಳತೆಗೆ) ಕಾರ್ಯಕ್ಕೆ 37,600 ಅರ್ಜಿಗಳು ಭೂಮಿ ಯೋಜನೆಯಡಿ ಸಲ್ಲಿಕೆಯಾಗಿದೆ. ಇದರಲ್ಲಿ 23,036 ಅರ್ಜಿಗಳು ಎರಡೆರಡು ಬಾರಿ ಸಲ್ಲಿಕೆ ಇತ್ಯಾದಿ ಕಾರಣಕ್ಕೆ ತಿರಸ್ಕೃತಗೊಂಡಿವೆ. 14,611 ಅರ್ಜಿಗಳು ಪೋಡಿ ಪ್ರಕ್ರಿಯೆಗೆ ಕಳುಹಿಸಲಾಗಿದೆ. ಉಪತಹಶೀಲ್ದಾರ್‌ಗೆ 32,186 ಅರ್ಜಿಗಳು ಬಂದಿದ್ದು, 1,728 ಅರ್ಜಿಗಳು ತಿರಸ್ಕೃತಗೊಂಡಿವೆ. 30,458 ಅರ್ಜಿಗಳು ವಿಲೇವಾರಿ ಹಂತದಲ್ಲಿದೆ. ಆಕಾರಬಂದಿ(ಮೂಲ ಕಡತಗಳು)ಗಾಗಿ 12,677 ಅರ್ಜಿಗಳು ಬಾಕಿ ಉಳಿದಿವೆ. 20,394 ಅರ್ಜಿಗಳು ಅಂಕಿ ಅಂಶಗಳ ದಾಖಲಾತಿಗೆ ಬಾಕಿಯಾಗಿವೆ. 9,346 ಅರ್ಜಿಗಳಲ್ಲಿ ಅಂಕಿ ಅಂಶ ದಾಖಲಾಗಿವೆ. 718 ಅರ್ಜಿಗಳನ್ನು ಕಂದಾಯ ನಿರೀಕ್ಷಕರಿಗೆ ವಾಪಸ್‌ ಕಳುಹಿಸಲಾಗಿದೆ. 638 ಅರ್ಜಿಗಳು ಬಾಕಿಯುಳಿದಿದೆ. ಪೋಡಿ ಕಾರ್ಯದಲ್ಲಿ ದ.ಕ. ಹೊರತುಪಡಿಸಿ ಹಾಸನ ದ್ವಿತೀಯ, ಕಲಬುರಗಿ ತೃತೀಯ ಸ್ಥಾನದಲ್ಲಿದೆ.  

ಆಂದೋಲನ ರೀತಿ ಪೋಡಿ ಕಾರ್ಯ

1 ರಿಂದ 5 ತಂತ್ರಾಂಶದ ಪೋಡಿ ಕಾರ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಈಗಾಗಲೇ 93 ಸರ್ವೇಯರ್‌ಗಳನ್ನು ನಿಯೋಜಿಸಲಾಗಿದೆ. ವಿಶೇಷ ಆಂದೋಲನ ರೀತಿಯಲ್ಲಿ ಪೋಡಿ ಕಾರ್ಯ ನಡೆಸಲಾಗುತ್ತಿದೆ. ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕು ಮಟ್ಟದಲ್ಲಿ ಎಲ್ಲ ತಹಶೀಲ್ದಾರ್‌ಗೆ ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಭೂಹಿಡುವಳಿದಾರರಿಗೆ ಪೋಡಿ ಅಥವಾ ಅಳತೆ ಕಾರ್ಯ ನಡೆಸಿ ನಕ್ಷೆ ತಯಾರಿಸಿ ಪಹಣಿ ಪತ್ರ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾರ್ಗದರ್ಶನದಲ್ಲಿ ಪೋಡಿ ಕಾರ್ಯ ಮಾದರಿಯಾಗಿ ನಡೆಯುತ್ತಿದೆ.