ನೈಸ್‌ ರಸ್ತೆ ವಿಚಾರದಲ್ಲಿ ಅಶೋಕ್‌ ಖೇಣಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಠಿಣ ಕ್ರಮ ಕೈಗೊಂಡರೆ ಬಹಳ ಸಂತೋಷ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೈಸ್‌ ರಸ್ತೆ ವಿಚಾರದಲ್ಲಿ ಅಶೋಕ್‌ ಖೇಣಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಠಿಣ ಕ್ರಮ ಕೈಗೊಂಡರೆ ಬಹಳ ಸಂತೋಷ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೈಸ್‌ ರಸ್ತೆಯ ವಿಚಾರದಲ್ಲಿ ಅಶೋಕ್‌ ಖೇಣಿ ಅವರದು ಅತಿಯಾಯಿತು. ಅವರ ಮೇಲೆ ಕ್ರಮ ಅನಿವಾರ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಮೊದಲ ಬಾರಿಗೆ ಕಠಿಣವಾಗಿ ಹೇಳಿರುವುದು ಸ್ವಾಗತಾರ್ಹ. ಕ್ರಮ ಕೈಗೊಂಡರೆ ನನಗೆ ಬಹಳ ಸಂತೋಷ. ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೈಸ್‌ ರಸ್ತೆ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಬಳಿಕ ನಾನು ಪ್ರಧಾನಿಯಾಗಿ ದೆಹಲಿಗೆ ಹೋದ ಬಳಿಕ ಏನೇನೋ ಬೆಳವಣಿಗೆಗಳು ಜರುಗಿದವು. ಈ ಯೋಜನೆ ಬಗ್ಗೆ ಮಾತನಾಡಬಾರದು ಎಂದು ನನ್ನ ವಿರುದ್ಧ ಕೇಸ್‌ ಹಾಕಿದ್ದರು. ಈಗ ಅಶೋಕ್‌ ಖೇಣಿ ಅವರು ನಾನು ದೇವೇಗೌಡರ ವಿರುದ್ಧ ರಿಟ್‌ ಹಾಕಿಲ್ಲ ಎಂದಿದ್ದಾರೆ. ಆದರೆ, ಜ.21ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಿದೆ. ಇಬ್ಬರು ಖಾಸಗಿ ವ್ಯಕ್ತಿಗಳನ್ನು ಪ್ರತಿವಾದಿಗಳಾಗಿದ್ದಾರೆ. ನನ್ನನ್ನೂ ಇದರಲ್ಲಿ ಪ್ರತಿವಾದಿ ಮಾಡಲಾಗಿದೆ ಎಂದು ಹೇಳಿದರು.

ರಸ್ತೆ ಪೂರ್ಣಗೊಳ್ಳದೆ ಟೋಲ್‌ ಸಂಗ್ರಹಿಸುವಂತಿಲ್ಲ:

ಬೆಂಗಳೂರು-ಮೈಸೂರು ನಡುವೆ ನೈಸ್‌ ರಸ್ತೆ ಪೂರ್ಣ ನಿರ್ಮಾಣದವರೆಗೂ ಟೋಲ್‌ ಶುಲ್ಕ ಸಂಗ್ರಹಿಸುವಂತಿಲ್ಲ. ಆದರೂ ದಿನಕ್ಕೆ 2.5 ಕೋಟಿ ರು. ಟೋಲ್‌ ಸಂಗ್ರಹಿಸಲಾಗುತ್ತಿದೆ. ರಸ್ತೆ ನಿರ್ಮಾಣದ 30 ವರ್ಷದ ಬಳಿಕ ಆ ರಸ್ತೆಯನ್ನು ಸರ್ಕಾರಕ್ಕೆ ವಾಪಾಸ್‌ ಕೊಡಬೇಕು ಎಂಬ ಷರತ್ತೂ ಇದೆ. ಈ ಸಂಬಂಧ ಪರಸ್ಪರ ಒಪ್ಪಂದಕ್ಕೆ ಸಹಿ ಸಹ ಹಾಕಲಾಗಿದೆ. ಈ ಬಗ್ಗೆ ಮಾತನಾಡಲು ತುಂಬಾ ವಿಷಯವಿದೆ. ಸಿದ್ಧರಾಮಯ್ಯಗೂ ಎಲ್ಲವೂ ಗೊತ್ತಿದೆ ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದರು.

ಬಳ್ಳಾರಿ ವಿಚಾರದಲ್ಲಿ ಕಾದು ನೋಡೋಣ:

ಬಳ್ಳಾರಿ ಗಲಾಟೆ ಬಗ್ಗೆ ಮಾಧ್ಯಮಗಳ ಸುದ್ದಿ ನೋಡಿ ತಿಳಿದುಕೊಂಡಿದ್ದೇನೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್‌ ಕಟ್ಟುವ ವಿಚಾರಕ್ಕೆ ಇದು ನಡೆದಿದೆ. ನಾಲ್ಕು ಎಫ್‌ಐಆರ್ ಆಗಿದೆ. ಖಾಸಗಿ ವ್ಯಕ್ತಿ ಗುಂಡು ಹಾರಿಸಿದ್ದಾರೆ ಎಂಬುದು ಮಾಧ್ಯಮಗಳಿಂದ ಗೊತ್ತಾಗಿದೆ. ಈ ಬಗ್ಗೆ ನಾನು ನಿಖರವಾಗಿ ಹೀಗೆ ಆಯಿತು ಎಂದು ಹೇಳುವುದು ಕಷ್ಟ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬ್ಯಾಲೆಟ್‌ ಪೇಪರ್ ಸೂಕ್ತ ಎಂದಿದ್ದೆ:

ಇವಿಎಂ ಯಂತ್ರಗಳ ಬಗ್ಗೆ ಪರ-ವಿರೋಧ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ಬ್ಯಾಲೆಟ್‌ ಪೇಪರ್‌ ಮುಂದುವರಿಸೋದು ಸೂಕ್ತ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಈ ಸಂಬಂಧ ಪತ್ರ ವ್ಯವಹಾರ ಮಾಡಿದ್ದೆ. ಮಮತಾ ಬ್ಯಾನರ್ಜಿ ಆಕ್ರೋಶದ ಮಾತುಗಳನ್ನು ಕೇಳಿದ್ದೇನೆ. ತಮಿಳುನಾಡಿನಲ್ಲಿ ಏನು ನಡೆಯುತ್ತಿದೆ ಗೊತ್ತಿದೆ. ಇದು ಪ್ರಮುಖ ವಿಚಾರ. ನಮ್ಮದು ಸಣ್ಣ ಪಕ್ಷ. ಈಗ ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಇವಿಎಂ ಕುರಿತ ಪ್ರಶ್ನೆಯೊಂದಕ್ಕೆ ದೇವೇಗೌಡರು ಪ್ರತಿಕ್ರಿಯಿಸಿದರು.