ಸಾರಾಂಶ
ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಭವನ ಹಾಗೂ ದೇವಸ್ಥಾನ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಉತ್ತಮ ಬೆಳವಣಿಗೆ. ಸಮಾಜದಲ್ಲಿ ಎಲ್ಲ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಐಕ್ಯತೆ ಪ್ರದರ್ಶಿಸಬೇಕಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬೆಳೆಯಾಗಲಿ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಭವನ ಹಾಗೂ ದೇವಸ್ಥಾನ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಉತ್ತಮ ಬೆಳವಣಿಗೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.ಪಟ್ಟಣದ ಕನಕಪುರ ರಸ್ತೆಯ ಕೆ.ಎನ್.ನಾಗೇಗೌಡ ಬಡಾವಣೆಯಲ್ಲಿ ಪೇಟೆ ಒಕ್ಕಲಗೇರಿಯ ಶ್ರೀರಾಮ ಒಕ್ಕಲಿಗರ ಸೇವಾ ಸಂಘದಿಂದ ನಿರ್ಮಿಸಿರುವ ಪ್ರಸನ್ನ ಗಣಪತಿ ದೇವಸ್ಥಾನ ಹಾಗೂ ಶ್ರೀರಾಮ ಒಕ್ಕಲಿಗರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಐಕ್ಯತೆ ಪ್ರದರ್ಶಿಸಬೇಕಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಬೆಳೆಯಾಗಲಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಒಕ್ಕಲಿಗರು ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಚಟುವಟಿಕೆಯಿಂದ ಕೂಡಿದ್ದಾರೆ. ಸಾರ್ವಜನಿಕರ ಉಪಯೋಗ ಬರುವಂತ ಕೆಲಸ ಮಾಡಲು ಯಾವುದೇ ಪಕ್ಷದ ಅವಶ್ಯಕತೆ ಇಲ್ಲ, ಸಂಪನ್ಮೂಲ ಸಂಗ್ರಹಿಸಿ ಉತ್ತಮವಾಗಿ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದರು.ಮೈಸೂರು ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಪರಂಪರೆ ಹಾಗೂ ಧರ್ಮದ ಮೂಲವನ್ನು ಉಳಿಸಿಕೊಂಡು ಬಂದಿರುವ ಏಕೈಕ ದೇಶ ನಮ್ಮದಾಗಿದೆ. ಭಾರತೀಯರ ಧರ್ಮ ಶಾಶ್ವತವಾಗಿ ಉಳಿಯಬೇಕಿದ್ದರೇ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆಯನ್ನು ಸರಿಪಡಿಸುವುದರ ಜೊತೆಗೆ ಹೆಚ್ಚಿನ ಅನುದಾನ ನೀಡಲು ಮುಂದಾಗುತ್ತೇವೆ. ನೀರಾವರಿ ಹಾಗೂ ನಾಲಾ ಆಧುನೀಕರಣದ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಚತುಷ್ಪದ ರಸ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಪೇಟೆ ಒಕ್ಕಲಿಗೇರಿಯ ಮುಖಂಡರು ಸಂಘಟಿತರಾಗಿ ಒಳ್ಳೆಯ ಕೆಲಸ ಮಾಡಿರುವುದು ಒಳ್ಳೆಯಯ ಬೆಳವಣಿಗೆ ಎಂದರು.
ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಅಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಪ್ರಾಚೀನ ಇತಿಹಾಸ ಪುರಾತತ್ವ ಅಧ್ಯಯನ ಮತ್ತು ಸಂತೋಧನಾ ವಿಭಾಗದ ಮುಖ್ಯಸ್ಥ ಪ್ರವೀಣ ಶಲ್ವಪ್ಪಿಳ್ಳೈ ಅಯ್ಯಂಗಾರ್, ಮಾಜಿ ಸಚಿವ ಹಾಲಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಂ.ಸಿ.ವೀರೇಗೌಡ, ಎಂ.ಎಚ್.ಕೆಂಪಯ್ಯ, ವೆಂಕಟಪ್ಪ, ದೊಡ್ಡಯ್ಯ, ಚಿಕ್ಕರಾಜು ಸೇರಿದಂತೆ ಇತರರು ಇದ್ದರು.