ಇತ್ತೀಚಿನ ದಿನಗಳಲ್ಲಿ ನಿವೃತ್ತರಿಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಘವು ಆರೋಗ್ಯ ಸುಧಾರಣೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದು, ಕಣ್ಣಿನ ತಪಾಸಣೆಯೂ ಸೇರಿದಂತೆ ಇತರೆ ಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ನಿವೃತ್ತರ ಆರೋಗ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಘವು ಹೆಚ್ಚು ಒತ್ತು ನೀಡುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಆರೋಗ್ಯ ಯೋಜನೆಗಳ ಜಾರಿಗೆ ನಿರಂತರ ಹೋರಾಟ ನಡೆಸುತ್ತಿದೆ. ಇದರಿಂದ ಕೆಲವು ಯೋಜನೆಗಳು ಜಾರಿಯಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ತಿಳಿಸಿದರು.

ಇಲ್ಲಿನ ಬಾಲ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸರ್ವಸದಸ್ಯರ ಮಹಾಸಭೆ, ನಿವೃತ್ತ ನೌಕರರ ದಿನಾಚರಣೆ ಹಾಗೂ ಹಿರಿಯ ಚೇತನಗಳಿಗೆ ಸನ್ಮಾನ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ನೌಕರಿಯಲ್ಲಿದ್ದು, ನಿವೃತ್ತಿ ಹೊಂದಿದ ನಂತರ ಬಹಳಷ್ಟು ಜನರಿಗೆ ಸವಾಲಾಗಿರುವುದು ಅನಾರೋಗ್ಯದ ಸಮಸ್ಯೆ. ಈ ನಿಟ್ಟಿನಲ್ಲಿ ವಿವಿಧ ಆರೋಗ್ಯ ಯೋಜನೆಗಳ ಜಾರಿಗೆ ಸಂಘ ಶ್ರಮಿಸುತ್ತಿದೆ ಎಂದರು.

ನಿರಂತರ ಹೋರಾಟದ ಫಲವಾಗಿ ಸಂಧ್ಯಾವಂದನ ಆರೋಗ್ಯಭಾಗ್ಯ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ಈಗಾಗಲೇ ಜಾರಿ ಹಂತಕ್ಕೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆಯೂ ಅನುಷ್ಠಾನದಲ್ಲಿದೆ. 70 ವರ್ಷ ಮೀರಿದವರಿಗೆ ಈ ಯೋಜನೆಯಿಂದ 5 ಲಕ್ಷ ರು.ಗಳವರೆಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯ ಸರ್ಕಾರದ ಶೇ.40 ಅನುಪಾತದಲ್ಲಿ ಈ ಯೋಜನೆ ಜಾರಿಯಾಗಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದು. ಈ ಯೋಜನೆಗೆ ರಾಜ್ಯ ಸರ್ಕಾರವೂ ಸಹ ಸ್ಪಂದಿಸಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ನಿವೃತ್ತರ ಹಕ್ಕುಗಳಿಗೆ ಸಂಘಟನೆಯಿಂದ ಅನುಕೂಲವಾಗುತ್ತಿರುವ ಬಗ್ಗೆ ತಿಳಿಸಿದರು ಹಾಗೂ ಸಂಘದ ಚಟುವಟಿಕೆಗಳಲ್ಲಿ ನಿವೃತ್ತರು ಹೆಚ್ಚು ಕ್ರಿಯಾಶೀಲರಾಗುವಂತೆ ಕರೆ ನೀಡಿದರು.

ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಇತ್ತೀಚಿನ ದಿನಗಳಲ್ಲಿ ನಿವೃತ್ತರಿಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಘವು ಆರೋಗ್ಯ ಸುಧಾರಣೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದು, ಕಣ್ಣಿನ ತಪಾಸಣೆಯೂ ಸೇರಿದಂತೆ ಇತರೆ ಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ವಾಸನ್ ಐ ಕೇರ್, ದಯಾಸ್ಪರ್ಶ ಆಸ್ಪತ್ರೆಗಳು ನಮ್ಮ ಜೊತೆಗೆ ಕೈಜೋಡಿಸಿವೆ. ನಿವೃತ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಅಭಿನಂದಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಸಿದ್ಧರಾಮಣ್ಣ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ, ಜಿಲ್ಲಾ ಖಜಾನೆ ಉಪನಿರ್ದೇಶಕರಾದ ಉಮಾ ಆರ್.ಪಿ., ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ಎಂ.ರಂಗಸ್ವಾಮಿ, ಕೇಂದ್ರ ಸಂಘದ ಪದಾಧಿಕಾರಿಗಳಾದ ಆನಂದಪ್ಪ, ಎಲ್.ನಂಜಪ್ಪ, ಶಾರದಮ್ಮ, ಪ್ರಸಾದ್, ಜಿಲ್ಲಾ ಸಂಘದ ಅನಂತರಾಮಯ್ಯ, ಈಶ್ವರಪ್ಪ ನಂದೀಶಯ್ಯ, ಜಯಶೀಲ, ಹನುಮಂತಪ್ಪ, ಮಂಜುಳಾದೇವಿ, ಹನುಮಂತರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.

ಆರ್.ಲೀಲಾವತಿ ಪ್ರಾರ್ಥಿಸಿದರು. ಪುಟ್ಟನರಸಯ್ಯ ಸ್ವಾಗತಿಸಿದರು. ನರಸಿಂಹರೆಡ್ಡಿ ಹಾಗೂ ಸಿ.ಎಚ್.ಬೋರೇಗೌಡ ಶೈಲಜ ಕಾರ್ಯಕ್ರಮ ನಿರೂಪಿಸಿ, ಅನಂತರಾಮಯ್ಯ ವಂದಿಸಿದರು.