ಸಾರಾಂಶ
ಪ್ರಧಾನ ಮಂತ್ರಿಯಾಗಿ ರಾಜ್ಯ ಹಾಗೂ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಅವಧಿಯಲ್ಲಿ ನೀರಾವರಿ ಕ್ಷೇತ್ರದಲ್ಲಿನ ಯೋಜನೆಗಳು ರೈತರಿಗೆ ಇಂದಿಗೂ ವರದಾನವಾಗಿವೆ. ರಾಜ್ಯ ಸೇರಿದಂತೆ ದೇಶಾದ್ಯಂತ ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದರ ಜೊತೆಗೆ ರೈಲ್ವೆ, ನೀರಾವರಿ, ವಿದ್ಯುತ್, ಕೈಗಾರಿಕೆ, ಕೃಷಿ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ರಾಷ್ಟ್ರ ಮಟ್ಟದಲ್ಲಿ ಕನ್ನಡಿಗರ ಗಟ್ಟಿ ಧ್ವನಿಯಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ರಾಷ್ಟ್ರ ಕಂಡ ಮಹಾನ್ ನಾಯಕರಾಗಿದ್ದಾರೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ತಾಲೂಕಿನ ಕಂದೇಗಾಲ ಸಮೀಪದ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು- ಹಂಪಲು ವಿತರಿಸಿ ಮಾತನಾಡಿದರು.
ನಾಡು, ನುಡಿ, ಜಲ ವಿಷಯಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕನ್ನಡಿಗರ ಗಟ್ಟಿ ಧ್ವನಿಯಾಗಿರುವ ದೇವೇಗೌಡರು ಪ್ರಧಾನಿಯಾಗಿ ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲರಿಗೂ ಸೌಲಭ್ಯ ಸಿಗುವಂತೆ ಮೀಸಲಾತಿಯನ್ನು ಜಾರಿಗೆ ತಂದು ಕೊಟ್ಟ ಸಾಧಕರಾಗಿದ್ದಾರೆ ಎಂದರು.ಪ್ರಧಾನ ಮಂತ್ರಿಯಾಗಿ ರಾಜ್ಯ ಹಾಗೂ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಅವಧಿಯಲ್ಲಿ ನೀರಾವರಿ ಕ್ಷೇತ್ರದಲ್ಲಿನ ಯೋಜನೆಗಳು ರೈತರಿಗೆ ಇಂದಿಗೂ ವರದಾನವಾಗಿವೆ. ರಾಜ್ಯ ಸೇರಿದಂತೆ ದೇಶಾದ್ಯಂತ ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದರ ಜೊತೆಗೆ ರೈಲ್ವೆ, ನೀರಾವರಿ, ವಿದ್ಯುತ್, ಕೈಗಾರಿಕೆ, ಕೃಷಿ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ನೂರಾರು ವರ್ಷಗಳ ಕಾಲ ಬದುಕಿ ದೇಶಕ್ಕೆ ತಮ್ಮದೇ ಆದ ಸಲಹೆ- ಸೂಚನೆಗಳನ್ನು ನಿರಂತರವಾಗಿ ನೀಡಲಿ ಎಂದು ಹಾರೈಸಿದರು.ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಸಿದ್ದರಾಜು, ಮುಖಂಡರಾದ ಬೂವಳ್ಳಿ ಸದಾನಂದ, ಕುಮಾರ್, ಕಂಬರಾಜು ಸೇರಿದಂತೆ ಇತರರು ಇದ್ದರು.