ಸಮಾಜದವರಿಗೆ ನೇಕಾರಿಕೆ ಹೊರತುಪಡಿಸಿ ಅನ್ಯ ಕಸುಬು ತಿಳಿದಿಲ್ಲ. ಮಹಿಳೆಯರು ಊಟದ ಎಲೆ ಕಟ್ಟುತ್ತಾ ಕುಟುಂಬಕ್ಕೆಆಸರೆಯಾಗಿದ್ದರು. ಇಂದು ಮುತ್ತುಗದ ಮರಗಳಿಲ್ಲವಾಗಿ ಮಹಿಳೆಯರ ಕಸುಬು ಕಿತ್ತುಕೊಂಡಿದೆ.
ಕಿಕ್ಕೇರಿ: ಧ್ವನಿ ಇಲ್ಲದ ಕುರುಹಿನಶೆಟ್ಟಿ (ನೇಕಾರ) ಸಮಾಜಕ್ಕೆ ಶಿಕ್ಷಣ ಪ್ರಬಲ ಅಸ್ತ್ರವಾದಲ್ಲಿ ಮಾತ್ರ ಭವಿಷ್ಯದ ಮಕ್ಕಳಿಗೆ ಉತ್ತಮ ಬದುಕು ಸಿಗಲು ಸಾಧ್ಯ ಎಂದು ಹಾಸನ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಶೆಟ್ಟಿ ಹೇಳಿದರು.
ಪಟ್ಣಣದಲ್ಲಿ ಕುರುಹಿನಶೆಟ್ಟಿ ಸಂಘ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದವರಿಗೆ ನೇಕಾರಿಕೆ ಹೊರತುಪಡಿಸಿ ಅನ್ಯ ಕಸುಬು ತಿಳಿದಿಲ್ಲ. ಮಹಿಳೆಯರು ಊಟದ ಎಲೆ ಕಟ್ಟುತ್ತಾ ಕುಟುಂಬಕ್ಕೆಆಸರೆಯಾಗಿದ್ದರು. ಇಂದು ಮುತ್ತುಗದ ಮರಗಳಿಲ್ಲವಾಗಿ ಮಹಿಳೆಯರ ಕಸುಬು ಕಿತ್ತುಕೊಂಡಿದೆ. ಇಂತಹ ಸಮಯದಲ್ಲಿ ಅನಕ್ಷರತೆಯಿಂದ ಹೊರಬಂದು ಅಕ್ಷರಸ್ಥರಾಗಲು ಮುಂದಾಗುವಂತೆ ತಿಳಿಸಿದರು.ಪಟ್ಟಣದ ರೇಷ್ಮೆ ಸೀರೆಗೆ ಪ್ರಸಿದ್ಧಿ ಇತ್ತು. ಮೈಸೂರು ರಾಜರಿಗೆ ರೇಷ್ಮೆ ಸೀರೆ ಸರಬರಾಜು ಮಾಡಲಾಗುತ್ತಿತ್ತು. ಇಂದು ನೇಕಾರಿಕೆ ಕಸುಬು ಅಳಿವಿನಂಚಿನಲ್ಲಿದೆ. ಕಚ್ಚಾ ವಸ್ತು, ಕಾರ್ಮಿಕರ ಕೊರತೆ, ಬೆಲೆ ಕುಸಿತದಂತಹ ಸಮಸ್ಯೆಗಳನ್ನು ಎದುರಿಸಲಾಗದೆ ಮಗ್ಗದ ಗುಂಡಿಗಳು ಗ್ರಾಮದಲ್ಲಿ ಮುಚ್ಚುತ್ತಿವೆ. ಕಸುಬು ಅರಸಿ ಪಟ್ಟಣಗಳಿಗೆ ಗುಳೇ ಹೋಗಿದ್ದಾರೆ. ಅನ್ಯಕಸುಬು ತಿಳಿಯದಿರುವ ಸಮುದಾಯಕ್ಕೆಆಸರೆಯಾಗಿ ಸರ್ಕಾರ ನಿಲ್ಲಬೇಕಿದೆ ಎಂದು ಆಶಿಸಿದರು.
ಶಶಿ ಸಂಜೀವಿನಿ ಸೇವಾ ಟ್ರಸ್ಟ್‌ಅಧ್ಯಕ್ಷ ಕೆ.ಎಚ್.ಸಂಜೀವಶೆಟ್ಟಿ ಮಾತನಾಡಿ, ಹಿಂದುಳಿದ ತಮ್ಮ ಸಮಾಜದಲ್ಲಿ ಸಂಘಟನೆ ಕೊರತೆ ಕಾಡುತ್ತಿದೆ. ಯುವಕರು ಸಮುದಾಯದ ಸಾಂಘಿಕ ಒಗ್ಗಟ್ಟಿನ ಶಕ್ತಿಗೆ ಮುಂದಾಗಿ ಎಂದು ವಿನಂತಿಸಿದರು.ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಬಿಎ, ಬಿಇ ಮತ್ತಿತರ ಪದವಿ ಮುಗಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಸೆಸ್ಕಾಂ ನಿವೃತ್ತ ಎಇಇ ತಿಮ್ಮಶೆಟ್ಟಿ, ಜಿಲ್ಲಾ ನೇಕಾರ ಸಮಾಜ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್, ಹಾಸನ ಸಂಘದ ಅಧ್ಯಕ್ಷ ಕೆ.ಎಚ್.ನಾರಾಯಣಶೆಟ್ಟಿ, ಕಿಕ್ಕೇರಿ ಸಮಾಜದಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ. ಉಮೇಶ್, ಉಪಾಧ್ಯಕ್ಷೆ ಎಸ್.ಆರ್.ವಿನೋದಮ್ಮ, ಜಂಟಿ ಕಾರ್ಯದರ್ಶಿ ಸುನೀತಾ, ಮೈಸೂರು ರಾಮಮಂದಿರ ಅಧ್ಯಕ್ಷ ಕೆ.ಜೆ.ರಾಮಶೆಟ್ಟಿ, ನಿವೃತ್ತ ಪ್ರೊಫೆಸರ್ ನಾರಾಯಣಶೆಟ್ಟಿ, ನಾಗೇಶ್, ಕೆ.ಆರ್.ಪಾಂಡು, ಸಿ.ಎಸ್.ಸಾವಿತ್ರಿ, ಭಾರತಿ, ಗಿರಿಜಾ, ಲೀಲಾವತಿ, ಪಾರ್ವತಿ, ಪುಟ್ಟಲಕ್ಷ್ಮೀ, ಪಂಕಜ ಇದ್ದರು.