ಸಾರಾಂಶ
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ
ಇನ್ನೆರಡು ದಿನಗಳಲ್ಲಿ ಚನ್ನಪಟ್ಟಣಕ್ಕೆ ವಿಶೇಷ ಅನುದಾನ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ಮನವಿ ಮಾಡಿದ್ದೀವಿ. ನೀರಾವರಿ ಯೋಜನೆಗೆ ಶಕ್ತಿ ನೀಡುವಂತೆ ವಿನಂತಿಸಿದ್ದೇವೆ. ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳ ಕುರಿತು ಸಹ ಚರ್ಚೆ ಮಾಡಿದ್ದು, ಅವರಿಂದ ಸಹಕಾರದ ಭರವಸೆ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಕಳೆದ 15 ದಿನಗಳಲ್ಲಿ ಅವಧಿಯಲ್ಲಿ ಚನ್ನಪಟ್ಟಣ ತಾಲೂಕಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿದ ನಾಲ್ಕನೆ ಭೇಟಿ ಇದಾಗಿದೆ. ತಾಲೂಕಿನ ಅರಳಾಳುಸಂದ್ರದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ವಿಶೇಷ ಅನುದಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಚರ್ಚೆ ಮಾಡಿ ಅನುದಾನ ನೀಡಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗೆ ಸಂಬಂಧಿಸಿದಂತೆ ಅನುದಾನ ನೀಡಲಾಗುವುದು ಎಂದರು.
ಚನ್ನಪಟ್ಟಣ ಭಾಗಕ್ಕೆ ಹೊಸ ಕೈಗಾರಿಕೆ ತರುವ ವಿಚಾರಕ್ಕೆ ಉತ್ತರಿಸಿ, ಕುಮಾರಸ್ವಾಮಿ ಅವರು ಕೇಂದ್ರಮಂತ್ರಿ ಇದ್ದಾರೆ. ಅವರು ಯಾವುದೇ ಕೈಗಾರಿಕೆ ತಂದರೂ ಪೂರ್ಣ ಸಹಕಾರ ನೀಡಲಾಗುವುದು. ಸರ್ಕಾರದಿಂದ ಸಂಪೂರ್ಣ ಸಹಕಾರ ಕೊಡಲು ನಾನು ಬದ್ಧ. ಕೈಗಾರಿಕೆಗಳನ್ನ ತಂದು ಉದ್ಯೋಗ ಕೊಡಲಿ ಎಂದರು.