ಸಾರಾಂಶ
ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಜನಾಂದೋಲನದ ಮೂಲಕ ಹಸಿಹಸಿ ಸುಳ್ಳುಗಳನ್ನು ಹೇಳಿ ಜನರಲ್ಲಿ ತಪ್ಪು ಭಾವನೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ- ಜೆಡಿಎಸ್ ವಿರುದ್ಧ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಟೀಕಿಸಿದರು.
ರಾಮನಗರ : ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಲು ತುದಿಗಾಲಲ್ಲಿ ನಿಂತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಜನಾಂದೋಲನದ ಮೂಲಕ ಹಸಿಹಸಿ ಸುಳ್ಳುಗಳನ್ನು ಹೇಳಿ ಜನರಲ್ಲಿ ತಪ್ಪು ಭಾವನೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ- ಜೆಡಿಎಸ್ ವಿರುದ್ಧ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಟೀಕಿಸಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿರೋಧಪಕ್ಷದ ರಚನಾತ್ಮಕ ಹೋರಾಟಗಳಿಗೆ ನೈತಿಕತೆ ಪ್ರದರ್ಶಿಸುವ ಬದಲು ಪರ್ಯಾಯವಾಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜನಾಂದೋಲನ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ಕಾಂಗ್ರೆಸ್‌ನವರ ಜನಾಂದೋಲನದಲ್ಲಿ ಮುಡಾದಲ್ಲಿ ನಡೆದಿರುವ ಹಗರಣ ಬಗ್ಗೆ ದಾಖಲೆಗಳನ್ನು ಕೊಟ್ಟು ಹಗರಣ ನಡೆದಿಲ್ಲ ಎಂದು ಸಾಬೀತುಪಡಿಸಬೇಕು. ಅದರ ಬದಲು ಬಿಜೆಪಿ ಸರ್ಕಾರ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ನಾವು ದಾಖಲೆ ಬಿಡುಗಡೆ ಮಾಡುತ್ತೇವೆಂದು ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡರು ಮುಖ್ಯಮಂತ್ರಿಗಳ ಪರವಾಗಿರುವ ದಾಖಲೆಗಳನ್ನು ಪರಿಶೀಲಿಸಿಲ್ಲ. ಮುಡಾ ಹೆಸರಿನಲ್ಲಿದ್ದ ಜಾಗ ಮಲ್ಲಿಕಾರ್ಜುನ ಹೆಸರಿಗೆ ಹೇಗೆ ಬಂತು? ಮಲ್ಲಿಕಾರ್ಜುನ್ ಅವರ ಹೆಸರಿಗೆ ನೋಂದಾವಣೆಯಾದ ಸಂದರ್ಭದಲ್ಲಿ (ಇಸಿ )ಎನ್ಕಂಬರೇನ್ಸ್ ಸರ್ಟಿಫಿಕೇಟ್ ಯಾರ ಹೆಸರಿನಲ್ಲಿತ್ತು? ಮುಡಾ ಹೆಸರಿನಲ್ಲಿದ್ದ ಆಸ್ತಿಯನ್ನು ಮಲ್ಲಿಕಾರ್ಜುನ್ ಅವರಿಗೆ ಹೇಗೆ ನೋಂದಣಿ ಆಯಿತೆಂಬ ಪೂರ್ವಾಪರ ದಾಖಲೆಗಳನ್ನು ಪರಿಶೀಲಿಸದೆ ಮುಖ್ಯಮಂತ್ರಿಗಳ ಪರ ಕೂಗುಮಾರಿಗಳಂತೆ ಅಬ್ಬರಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ದಡ್ಡತನಕ್ಕೆ ಸಾಕ್ಷಿ: ಅಶ್ವತ್ಥ ನಾರಾಯಣಗೌಡ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಕುರಿತು ಪ್ರಧಾನಿಗಳಿಂದ ಅನುಮತಿ ಕೊಡಿಸಿ ಎಂದು ಸಾರ್ವಜನಿಕ ಚರ್ಚೆ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ 2018ರಲ್ಲಿ ಸಾಧ್ಯತೆ ವರದಿ ಸಲ್ಲಿಸಲಾಗಿದೆ. ಇದಾದ ನಂತರ ಕೇಂದ್ರ ಸರ್ಕಾರ ಡಿಪಿಆರ್ ಮಾಡಲು ಹೇಳಿದ ಬಳಿಕ 2019ರಲ್ಲಿ ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರು. ಡಿಪಿಆರ್ ಯೋಜನೆ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು.
ಬಜೆಟ್ ಮುಂಗಡ ಹಣದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ 1000 ಕೋಟಿ ಬಿಡುಗಡೆ ಮಾಡಲಾಗಿದೆ. ಇದೆಲ್ಲವೂ ಸರ್ಕಾರಿ ದಾಖಲೆಯಲ್ಲಿರುವುದನ್ನು ಗಮನಿಸದೇ ಡಿ.ಕೆ.ಶಿವಕುಮಾರ್ ‘ನಮ್ಮ ನೀರು ನಮ್ಮ ಹಕ್ಕು’ ಎಂದು 2022 ಜನವರಿ 11ರಂದು ಮೇಕೆದಾಟು ಯೋಜನೆ ಪರವಾಗಿ ಪಾದಯಾತ್ರೆ ಪ್ರಾರಂಭಿಸಿದರು.
ಇದರಿಂದ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟನಲ್ಲಿ ಒಂದು ತಕರಾರು ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ನಲ್ಲಿ ತಕರಾರು ಅರ್ಜಿ ಇರುವಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಆಗುವುದಿಲ್ಲ ಎಂಬುದು ತಿಳಿದಿದ್ದರೂ ಡಿಕೆ ಶಿವಕುಮಾರ್ ರಾಜಕೀಯ ಕಾರಣಕ್ಕೆ ಪ್ರಧಾನ ಮಂತ್ರಿಗಳಿಂದ ಅನುಮತಿ ಕೊಡಿಸಿ ಎಂದು ಹೇಳಿಕೆ ಕೊಟ್ಟು ಜನರ ಮಧ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಡಿಕೆ ಶಿವಕುಮಾರ್ ಅವರ ದಡ್ಡತನಕ್ಕೆ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.
ಸ್ಟಾಲಿನ್ ಜೊತೆ ಚರ್ಚಿಸಿ: ಇಂಡಿಯಾ ಒಕ್ಕೂಟದ ನಾಯಕ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡಿಕೊಳ್ಳುವುದೇ ಸೂಕ್ತ. ಇದನ್ನು ಬಿಟ್ಟು ರಾಜಕೀಯ ಮಾಡುವುದು ತರವಲ್ಲ. ಡಿ.ಕೆ.ಶಿವಕುಮಾರ್ ತಾವು ಉಪಮುಖ್ಯಮಂತ್ರಿ ಎಂಬುದನ್ನು ಮರೆತು ಹಾದಿಬೀದಿಯಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಶೋಭೆ ತರುವ ವಿಚಾರವಲ್ಲ. ಸರ್ಕಾರ ದಿವಾಳಿಯಂಚಿಗೆ ಬಂದು ಕೂತಿದೆ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಅಶ್ವತ್ಥ ನಾರಾಯಣಗೌಡ ಟೀಕಿಸಿದ್ದಾರೆ.